ಮನೆಯಲ್ಲಿ ಎಷ್ಟು ಶುಚಿಯಾಗಿಟ್ಟುಕೊಂಡರೂ ಕೆಲವೊಮ್ಮೆ ಜಿರಳೆಗಳ ಕಾಟ ತಪ್ಪಿದ್ದಲ್ಲ. ಅದರಲ್ಲೂ ಅಡುಗೆ ಮನೆಯ ಡಬ್ಬಿಗಳ ನಡುವೆ, ಸಿಂಕ್ ಅಡಿಯಲ್ಲಿ ಅಡಗಿರುವ ಈ ಜಿರಳೆಗಳು ಆರೋಗ್ಯಕ್ಕೆ ಹಾನಿಕಾರಕ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ಪ್ರೇಗಳು ತಾತ್ಕಾಲಿಕ ಪರಿಹಾರ ನೀಡಿದರೂ, ಅವುಗಳ ವಾಸನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ನಿಮ್ಮ ಮನೆಯಲ್ಲಿರುವ ಕಿತ್ತಳೆ ಸಿಪ್ಪೆ ಮತ್ತು ಇತರ ಕೆಲವು ನೈಸರ್ಗಿಕ ವಸ್ತುಗಳ ಮೂಲಕವೇ ಜಿರಳೆಗಳಿಗೆ ಶಾಶ್ವತವಾಗಿ ಗುಡ್‌ಬೈ ಹೇಳಬಹುದು.
ಕಿತ್ತಳೆ ಸಿಪ್ಪೆ ಹೇಗೆ ಕೆಲಸ ಮಾಡುತ್ತದೆ?
ಜಿರಳೆಗಳಿಗೆ ಕಿತ್ತಳೆ ಅಥವಾ ಲಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳ ವಾಸನೆ ಎಂದರೆ ಆಗಿಬರುವುದಿಲ್ಲ. ಈ ಹಣ್ಣುಗಳ ಸಿಪ್ಪೆಯಲ್ಲಿರುವ ‘ಲಿಮೋನೆನ್’ ಎಂಬ ಅಂಶವು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಬಳಸುವ ವಿಧಾನ: ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜಿರಳೆಗಳು ಓಡಾಡುವ ಜಾಗದಲ್ಲಿ ಉದುರಿಸಬಹುದು. ಅಥವಾ ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಸ್ಪ್ರೇ ಬಾಟಲಿಗೆ ತುಂಬಿಸಿ ಮನೆಯ ಮೂಲೆ ಮೂಲೆಗಳಿಗೆ ಸಿಂಪಡಿಸುವುದರಿಂದ ಜಿರಳೆಗಳು ಆ ಜಾಗಕ್ಕೆ ಬರುವುದಿಲ್ಲ.
ಇತರ ನೈಸರ್ಗಿಕ ಪರಿಹಾರಗಳು:
ಬೆಳ್ಳುಳ್ಳಿ, ಈರುಳ್ಳಿ ಮತ್ತು ಕಾಳುಮೆಣಸಿನ ಮಿಶ್ರಣ:
ಒಂದು ಲೀಟರ್ ನೀರಿಗೆ ಒಂದು ಬೆಳ್ಳುಳ್ಳಿ ಎಸಳು, ಒಂದು ಈರುಳ್ಳಿ ಪೇಸ್ಟ್ ಮತ್ತು ಒಂದು ಚಮಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಳೆಗಳು ಅಡಗಿರುವ ಜಾಗದಲ್ಲಿ ಚಿಮುಕಿಸಿದರೆ, ಅದರ ತೀಕ್ಷ್ಣ ವಾಸನೆಗೆ ಜಿರಳೆಗಳು ಓಡಿಹೋಗುತ್ತವೆ.
ಬೇವು:
ಬೇವಿನ ಎಣ್ಣೆ ಅಥವಾ ಬೇವಿನ ಪುಡಿ ಜಿರಳೆಗಳನ್ನು ಓಡಿಸಲು ಅತ್ಯಂತ ಪರಿಣಾಮಕಾರಿ. ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿ ಸ್ಪ್ರೇ ಮಾಡುವುದರಿಂದ ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಯಬಹುದು.
ಸಕ್ಕರೆ ಮತ್ತು ಅಡುಗೆ ಸೋಡಾ:
ಸಕ್ಕರೆ ಮತ್ತು ಅಡುಗೆ ಸೋಡಾವನ್ನು ಸಮಪ್ರಮಾಣದಲ್ಲಿ ಬೆರೆಸಿ ಜಿರಳೆಗಳು ಬರುವ ಹಾದಿಯಲ್ಲಿ ಇರಿಸಿ. ಸಕ್ಕರೆಯ ಆಸೆಗೆ ಬರುವ ಜಿರಳೆಗಳು ಸೋಡಾವನ್ನು ಸೇವಿಸಿದಾಗ ಅವುಗಳ ಜೀರ್ಣಕ್ರಿಯೆ ವ್ಯತ್ಯಾಸವಾಗಿ ಸತ್ತುಹೋಗುತ್ತವೆ.
ಲವಂಗ:
ಲವಂಗದ ವಾಸನೆಯೂ ಸಹ ಜಿರಳೆಗಳಿಗೆ ಇಷ್ಟವಾಗುವುದಿಲ್ಲ. ಅಡುಗೆ ಮನೆಯ ಕಪಾಟುಗಳಲ್ಲಿ ಅಥವಾ ಡಬ್ಬಿಗಳ ಪಕ್ಕದಲ್ಲಿ ಕೆಲವು ಲವಂಗಗಳನ್ನು ಇರಿಸುವುದರಿಂದ ಜಿರಳೆಗಳು ಬರುವುದನ್ನು ತಡೆಯಬಹುದು.
ಗಮನಿಸಬೇಕಾದ ಅಂಶ:
ಈ ನೈಸರ್ಗಿಕ ಉಪಾಯಗಳ ಜೊತೆಗೆ ಮನೆಯನ್ನು, ಮುಖ್ಯವಾಗಿ ರಾತ್ರಿ ವೇಳೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತಿ ಮುಖ್ಯ. ಆಹಾರದ ಕಣಗಳು ನೆಲದ ಮೇಲೆ ಬೀಳದಂತೆ ನೋಡಿಕೊಂಡರೆ ಜಿರಳೆಗಳ ಕಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.








