ಗುವಾಹಟಿ: ಮಳೆಯಿಂದಾಗಿ 11 ಓವರ್‌ಗಳಿಗೆ ಸೀಮಿತಗೊಂಡ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ತಂಡ ಮುಂಬೈಗೆ ಬೃಹತ್ ಮೊತ್ತದ ಗುರಿ ನೀಡಿ ಹೈ-ವೋಲ್ಟೇಜ್ ಪಂದ್ಯವನ್ನು ಗೆದ್ದುಕೊಂಡಿದೆ.
ಕೇವಲ 32 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 77 ರನ್ ಚಚ್ಚಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ ಪಂದ್ಯದ ಗತಿಯನ್ನೇ ಬದಲಿಸಿತು. 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ 39 ರನ್ (5 ಸಿಕ್ಸರ್, 1 ಬೌಂಡರಿ) ಸಿಡಿಸಿ ಜೈಸ್ವಾಲ್ ಅವರಿಗೆ ಉತ್ತಮ ಸಾಥ್ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 5 ಓವರ್‌ಗಳಲ್ಲಿ 80 ರನ್ ಬಾರಿಸಿ ದಾಖಲೆ ಬರೆಯಿತು.
151 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 11 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ರೋಹಿತ್ ಶರ್ಮಾ (5), ಸೂರ್ಯಕುಮಾರ್ ಯಾದವ್ (6) ಮತ್ತು ಹಾರ್ದಿಕ್ ಪಾಂಡ್ಯ (9) ಅವರಂತಹ ಘಟಾನುಘಟಿ ಬ್ಯಾಟರ್‌ಗಳು ಬೇಗನೆ ವಿಕೆಟ್ ಒಪ್ಪಿಸಿದ್ದು ಮುಂಬೈಗೆ ಭಾರಿ ಹಿನ್ನಡೆಯಾಯಿತು.








