ಬೆಂಗಳೂರು: ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲಿದ್ದು, ಮೈಸೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ ಬಿಜೆಪಿ ಅವರನ್ನು ಕಣಕ್ಕಿಳಿಸಿದೆ.
2015ರ ಮೇ 28ರಂದು ಮೈಸೂರು ರಾಜವಂಶಸ್ಥ ಯದುವೀರ್ ಅವರು ಒಡೆಯರ್ ರಾಜವಂಶದ 27ನೇ ರಾಜನಾಗಿ ಪಟ್ಟಾಭಿಷೇಕ ನೇರವೇರಿಸಲಾಗಿದೆ. ಒಡೆಯರ್ ರಾಜವಂಶದ ಕೊನೆಯ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರು ಯದುವೀರ್ ಗೋಪಾಲ್ ರಾಜ್ ಅರಸ್ ಅವರನ್ನು ಮಕ್ಕಳಿಲ್ಲದ ಕಾರಣ ದತ್ತು ಪಡೆದರು, ನಂತರ ಅವರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರುನಾಮಕರಣ ಮಾಡಲಾಯಿತು.
ಗಿಟಾರ್ ಮತ್ತು ಸರಸ್ವತಿ ವೀಣೆ ನುಡಿಸುವುದನ್ನು ಆನಂದಿಸುವ ಯದುವೀರ್, ಅಮೆರಿಕದ ಅಮ್ಹೆರ್ಸ್ಟ್ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ನಲ್ಲಿ ಬಿಎ ಪೂರ್ಣಗೊಳಿಸಿದ್ದಾರೆ. ಇವರು ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಹಿರಿಯ ಪುತ್ರಿ ರಾಜಕುಮಾರಿ ಗಾಯತ್ರಿ ದೇವಿ ಅವರ ಮೊಮ್ಮಗ.
ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಯದುವೀರ್ ಟೆನಿಸ್ ಆಡುತ್ತಾರೆ ಮತ್ತು ಕುದುರೆ ರೇಸಿಂಗ್ ಉತ್ಸಾಹಿ. ಯದುವೀರ್ ರಾಜಸ್ಥಾನದ ಡುಂಗರಪುರ ರಾಜಮನೆತನಕ್ಕೆ ಸೇರಿದ ತ್ರಿಷಿಕಾ ಕುಮಾರಿ ಒಡೆಯರ್ ಅವರನ್ನು ವಿವಾಹವಾದರು. ತ್ರಿಷಿಕಾ ಅವರ ತಂದೆ ಹರ್ಷವರ್ಧನ್ ಸಿಂಗ್ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದರು.
ಮೈಸೂರು ರಾಜಮನೆತನಕ್ಕೆ ರಾಜಕೀಯ ಹೊಸದೇನಲ್ಲ. ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರು ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಶ್ರೀಕಂಠದತ್ತ ಅವರು ಹೆಚ್ಚಾಗಿ ಕಾಂಗ್ರೆಸ್ ನಲ್ಲಿದ್ದರು, ಆದರೆ ಬಿಜೆಪಿಯೊಂದಿಗೆ ಅಲ್ಪಾವಧಿ ಸಂಬಂಧವನ್ನು ಹೊಂದಿದ್ದರು. ಶ್ರೀಕಂಠದತ್ತ ಅವರ ತಂದೆ, ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಸ್ವಾತಂತ್ರ್ಯದ ನಂತರ ರಾಜಪ್ರಮುಖ್ / ಗವರ್ನರ್ ಹುದ್ದೆಯನ್ನು ಅಲಂಕರಿಸಿದ್ದರು.