ಬೆಂಗಳೂರು: 402 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ದಿನಾಂಕ 22-09-2024ರಂದು 402 ಪಿಎಸ್ಐ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸುವುದಾಗಿ ಕೆಇಎ ತಿಳಿಸಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, 402 PSI ಹುದ್ದೆಗಳಿಗೆ ಸೆ.22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ಇದಕ್ಕೆ KEA ಸಕಲ ಸಿದ್ಧತೆ ನಡೆಸಿದೆ. 66,000 ಮಂದಿ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಮತ್ತು ಶೂ ಧರಿಸುವುದನ್ನು ನಿಷೇಧಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಕಾಳರ್ ರಹಿತ ಶರ್ಟ್ ಧರಿಸಬೇಕು.
ಜೇಬುಗಳಿಲ್ಲದ ಅಥವಾ ಕಡಿಮೆ ಜೇಬು ಇರುವ ಬಟ್ಟೆಗಳನ್ನು ಧರಿಸಬೇಕು. ಜಿಪ್ ಪಾಕೆಟ್ ಗಳು, ಪಾಕೆಟ್ ಗಳು, ದೊಡ್ಡ ಬಟನ್ ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸಬಾರದು.
ಮಹಿಳಾ ಅಭ್ಯರ್ಥಿಗಳು ಕಾಲುಂಗರ ಮತ್ತು ಮಂಗಳಸೂತ್ರ ಧರಿಸಲು ಅವಕಾಶವಿದ್ದು, ಉಳಿದಂತೆ ಯಾವುದೇ ರೀತಿಯ ಲೋಹದ ಆಭರಣವನ್ನು ಧರಿಸುವುದಕ್ಕೆ ಎಲ್ಲಾ ಅಭ್ಯರ್ಥಿಗಳಿಗೆ ನಿರ್ಬಂಧವಿದೆ.