ಲಂಡನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ನಂತರ, ವಿಶ್ವದಾದ್ಯಂತದ ಪ್ರಸಿದ್ಧ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ
ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಜರ್ಮನಿಯ ಫೆಡರಲ್ ಚಾನ್ಸಲರ್ ಒಲಾಫ್ ಶೋಲ್ಜ್, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ.
“ಘನತೆವೆತ್ತ ಸರ್ಕಾರ ಮತ್ತು ಯುನೈಟೆಡ್ ಕಿಂಗ್ಡಮ್ ಪರವಾಗಿ, ಅಮೆರಿಕದ 47 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅಧ್ಯಕ್ಷ ಟ್ರಂಪ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಕಳುಹಿಸಲು ನಾನು ಬಯಸುತ್ತೇನೆ” ಎಂದು ಸ್ಟಾರ್ಮರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
“ಶತಮಾನಗಳಿಂದ, ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸಂಬಂಧವು ಸಹಯೋಗ, ಸಹಕಾರ ಮತ್ತು ನಿರಂತರ ಪಾಲುದಾರಿಕೆಯಾಗಿದೆ. ಇದು ವಿಶಿಷ್ಟವಾದ ನಿಕಟ ಬಂಧವಾಗಿದೆ. ಒಟ್ಟಾಗಿ, ನಾವು ಜಗತ್ತನ್ನು ದಬ್ಬಾಳಿಕೆಯಿಂದ ರಕ್ಷಿಸಿದ್ದೇವೆ ಮತ್ತು ನಮ್ಮ ಪರಸ್ಪರ ಭದ್ರತೆ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ಟ್ರಂಪ್ ಆಡಳಿತ ಮತ್ತು ಯುಕೆ ನಡುವಿನ ಸಹಕಾರವು ಮುಂಬರುವ ಸಮಯದಲ್ಲೂ ಮುಂದುವರಿಯುತ್ತದೆ ಎಂದು ಸ್ಟಾರ್ಮರ್ ಆಶಿಸಿದರು.
ಜರ್ಮನ್ ಚಾನ್ಸಲರ್ ಒಲಾಫ್ ಶೋಲ್ಜ್ ಟ್ರಂಪ್ ಅವರನ್ನು ಅಭಿನಂದಿಸಿದರು.ವಿಶ್ವದ ಅನಿಶ್ಚಿತತೆ ಮತ್ತು ಪ್ರಕ್ಷುಬ್ಧತೆಯ ಸಮಯವನ್ನು ಟ್ರಂಪ್ ನಿಭಾಯಿಸುತ್ತಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಆಶಿಸಿದ್ದಾರೆ.