ಬೆಂಗಳೂರು: ಭೂ ಹಾಗೂ ಗುಡ್ಡ ಕುಸಿತಗಳ ದೀರ್ಘಾವಧಿ ಉಪಶಮನಕ್ಕಾಗಿ 500 ಕೋಟಿ ರೂಪಾಯಿ ಖರ್ಚಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಮಡಿಕೇರಿ ಶಾಸಕ ಮಂತರ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, “ರಾಜ್ಯದಲ್ಲಿ ಯಾವ ಭಾಗದಲ್ಲಿ ಹೆಚ್ಚು ಭೂ-ಗುಡ್ಡ ಕುಸಿತ ಉಂಟಾಗುತ್ತೆ ಆ ಭಾಗವನ್ನು ಗುರುತಿಸಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಭೂ ಕುಸಿತ ತಡೆಗೆ ಶಾಶ್ವತ ಉಪಶಮನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಆರು ಜಿಲ್ಲೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಭೂ ಕುಸಿತ ತಡೆಗೆ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ” ಎಂದರು.
“ಯಾವ ಭಾಗದಲ್ಲಿ ಹೆಚ್ಚು ಭೂ-ಗುಡ್ಡ ಕುಸಿತ ಉಂಟಾಗಲಿದೆ ಹಾಗೂ ಅಲ್ಲಿ ಯಾವ ಡಿಸೈನ್‌ನಲ್ಲಿ ತಡೆಗೋಡೆ ನಿರ್ಮಿಸಬೇಕು ಎಂಬುದನ್ನು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಗುರುತಿಸಿ ಆ ಪಟ್ಟಿಯನ್ನು ನಮಗೆ ಕಳುಹಿಸುತ್ತದೆ. ನಾವು ಆ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇವೆ. ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಯಾವ ಭಾಗದಲ್ಲಿ ಹೆಚ್ಚು ಭೂ ಕುಸಿತ ಉಂಟಾಗಲಿದೆ, ಯಾವ ಭಾಗದ ಜನರಿಗೆ ಹೆಚ್ಚು ತೊಂದರೆ ಆಗಲಿದೆ ಎಂಬ ಆಧಾರದಲ್ಲಿ ಎಲ್ಲಿ ಕಾಮಗಾರಿ ಆಗಬೇಕು ಎಂದು ನಿರ್ಧರಿಸುತ್ತಾರೆ” ಎಂದು ಮಾಹಿತಿ ನೀಡಿದರು.
ಅಲ್ಲದೆ, “ಕೊಡಗಿಗೂ ಸಹ ಈಗಾಗಲೇ ಭೂ ಕುಸಿತ ತಡೆಗೆ 50 ಕೋಟಿ ರೂಪಾಯಿ ನೀಡಲಾಗಿದೆ. ತಾಂತ್ರಿಕ ತಂಡ ಶಿಫಾರಸು ಮಾಡಿದರೆ ಇನ್ನೂ ಹೆಚ್ಚಿನ ಹಣ ನೀಡಲು ಸರ್ಕಾರ ಬದ್ಧವಾಗಿದ. ಇದಲ್ಲದೆ, ಕಡಲ್ಕೊರೆತಕ್ಕೂ 300 ಕೋಟಿ ರೂಪಾಯಿ ನೀಡಲಾಗಿದೆ” ಎಂದು ಸದನಕ್ಕೆ ತಿಳಿಸಿದರು.
ಜಂಗಲ್ ಖರಾಬು-ಬಿ ಖರಾಬು ಜಮೀನಿನ ಮಂಜೂರಾತಿ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಹತ್ವದ ಮಾಹಿತಿ