ಮಂಡ್ಯ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಮಹಿಳಾ ಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಹಾಗೂ ಸೋಲಾರ್ ಬೀದಿ ದೀಪಗಳನ್ನು ಶನಿವಾರ ಅನಾವರಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಹಲವು ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಮಹಿಳಾ ಕಾರ್ಮಿಕರು ಆಟೋ, ದ್ವಿಚಕ್ರ ವಾಹನ ಸೇರಿದಂತೆ ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಮಹಿಳಾ ಕಾರ್ಮಿಕರು ತಾವು ಕಷ್ಟ ಪಟ್ಟು ದುಡಿದ ವೇತನದಲ್ಲಿ ಉಳಿತಾಯ ಮಾಡುವುದರ ಜೊತೆಗೆ ಸಂಸಾರ ನಡೆಸುವುದು ಸಹ ತುಂಬಾ ಕಷ್ಟಕರವಾಗುತ್ತಿದೆ.
ಹೀಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳಾ ಕಾರ್ಮಿಕರಿಗೆ ಉಚಿತ ಪ್ರಯಾಣವಾಗಿದ್ದು, ಮಂಡ್ಯ ನಗರದಿಂದ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೆ ಬೆಳಿಗ್ಗೆ ಮತ್ತು ಸಂಜೆ ವೇಳೆ 4 ಸಾರಿಗೆ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಮಹಿಳಾ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸರ್ಕಾರದ ಅನುದಾನಗಳ ಜೊತೆಗೆ ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಸ್ಥಳೀಯವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಹುದು ಹೀಗಾಗಿ ಕೈಗಾರಿಕೋದ್ಯಮಿಗಳು, ಕಂಪನಿಗಳು ಸಹ ಸ್ಥಳೀಯ ಸಂಸ್ಥೆಗಳ ಜೊತೆಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ಈಗಾಗಲೇ ಪ್ರತಿ ವರ್ಷ ಸಿಎಸ್‌ಆರ್ ನಿಧಿ ಯೋಜನೆಯಡಿ ಸ್ಥಳೀಯವಾಗಿ ಅತ್ಯಾಧುನಿಕವುಳ್ಳ ಲೈಬ್ರರಿ, ಬಸ್ ನಿಲ್ದಾಣಗಳು, ಸೋಲಾರ್ ವಿದ್ಯುತ್ ಕಂಬಗಳು, ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಹಾಗೂ ಕೋವಿಡ್ ವೇಳೆ ಆಸ್ಪತ್ರೆಗಳಿಗೆ ಯಂತ್ರೋಪಕರಣಗಳು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಿ ಎಂದರು.
ಜಿಲ್ಲೆಯ ಕೆಲವು ಕಾರ್ಖಾನೆಗಳು ಸಿಎಸ್ಆರ್ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡದಿರುವುದು ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಲತಾ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ ಪ್ರಧಾನ ವ್ಯವಸ್ಥಾಪಕ ರಮೇಶ್ ಬಂಡಿ, ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ಶಿವಪ್ರಸಾದ್, ವಿಶ್ವನಾಥ್ ಸೇರಿದಂತೆ ಮತ್ತಿತರರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಭ್ರಷ್ಟಾಚಾರ ಕೇಸ್: CBIನಿಂದ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷ ಸೇರಿ ಆರು ಸದಸ್ಯರ ಬಂಧನ
‘BMTC ನೌಕರ’ರಿಗೆ ಗುಡ್ ನ್ಯೂಸ್: 1.50 ಕೋಟಿ ‘ಅಪಘಾತ ವಿಮಾ ಪರಿಹಾರ’ಕ್ಕೆ ಸರ್ಕಾರ ಒಡಂಬಡಿಕೆ