ರಿಯಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ (Strait of Hormuz) ಬಹುತೇಕ ಮುಚ್ಚಲ್ಪಟ್ಟಿದ್ದರೂ, ಸೌದಿ ಅರೇಬಿಯಾ ತನ್ನ ತೈಲ ರಫ್ತು ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ತನ್ನ ಬೃಹತ್ ‘ಪೂರ್ವ-ಪಶ್ಚಿಮ ಪೈಪ್ಲೈನ್’ (East-West Pipeline) ಅನ್ನು ಬಳಸಿಕೊಂಡು ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡುವ ಮೂಲಕ ಪ್ರತಿದಿನ 70 ಲಕ್ಷ (7 ಮಿಲಿಯನ್) ಬ್ಯಾರೆಲ್ ತೈಲವನ್ನು ಸಾಗಿಸುವ ಗುರಿಯನ್ನು ಸೌದಿ ಸಾಧಿಸಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಕಡಿತಗೊಂಡ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ತನ್ನ ತೈಲವನ್ನು ಕೆಂಪು ಸಮುದ್ರದ ತೀರದಲ್ಲಿರುವ ಯಾನ್ಬು (Yanbu) ಬಂದರಿಗೆ ಪೈಪ್ಲೈನ್ ಮೂಲಕ ವರ್ಗಾಯಿಸುತ್ತಿದೆ.
ಸೌದಿ ಅರಾಮ್ಕೊ ಕಂಪನಿಯ ಈ ಪೈಪ್ಲೈನ್ ಈಗ ತನ್ನ ಗರಿಷ್ಠ ಸಾಮರ್ಥ್ಯವಾದ ದಿನಕ್ಕೆ 70 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಾಗಿಸುತ್ತಿದೆ. ಇದರಲ್ಲಿ 50 ಲಕ್ಷ ಬ್ಯಾರೆಲ್ ರಫ್ತಿಗೆ ಬಳಕೆಯಾಗುತ್ತಿದ್ದರೆ, ಉಳಿದ 20 ಲಕ್ಷ ಬ್ಯಾರೆಲ್ ಸ್ಥಳೀಯ ರಿಫೈನರಿಗಳಿಗೆ ಸರಬರಾಜಾಗುತ್ತಿದೆ.ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಶೇ. 20ರಷ್ಟು ತೈಲ ಸರಬರಾಜಾಗುತ್ತದೆ. ಸೌದಿಯ ಈ ಪರ್ಯಾಯ ಕ್ರಮದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ತೀವ್ರ ಅಭಾವ ಉಂಟಾಗುವುದು ತಪ್ಪಿದಂತಾಗಿದೆ.ಇರಾನ್-ಇರಾಕ್ ಯುದ್ಧದಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಸೌದಿ ಅರೇಬಿಯಾ ದಶಕಗಳ ಹಿಂದೆಯೇ ಈ ಪೈಪ್ಲೈನ್ ನಿರ್ಮಿಸಿತ್ತು. ಈಗಿನ ಬಿಕ್ಕಟ್ಟಿನ ಸಮಯದಲ್ಲಿ ಇದು ಸೌದಿಯ ಪಾಲಿಗೆ ವರದಾನವಾಗಿದೆ.








