ಹಾಸನ: ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಸ್ವಲ್ಪ ವಿಶ್ರಾಂತಿ ಕೊಟ್ಟು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಚನ್ನರಾಯಪಟ್ಟಣದಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಜೋರು ಮಳೆಯಲ್ಲೂ ನೆರೆದಿದ್ದ ಸಹಸ್ರಾರು ಮಂದಿಯನ್ನು ಉದ್ದೇಶಿಸಿ ಮಾತನಾಡಿದರು.
ಮೋದಿಯವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದ ದೇವೇಗೌಡರು ಈಗ ಉಲ್ಟಾ ಹೊಡೆದಿದ್ದಾರೆ. ತಮಗೂ ಮೋದಿಯವರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ. ನಿಮ್ಮ ಸಂಬಂಧ ಅಷ್ಟು ಚೆನ್ನಾಗಿದ್ದರೆ ಕೊಬ್ಬರಿ ಬೆಳೆಗೆ ಏಕೆ ಬೆಂಬಲ ಬೆಲೆ ಕೊಡಿಸಲಿಲ್ಲ? ಚನ್ನರಾಯಪಟ್ಟಣದ ಅಭಿವೃದ್ಧಿಗೆ ಹಣ ಏಕೆ ಕೊಡಿಸಲಿಲ್ಲ ಎಂದು ಪ್ರಶ್ನಿಸಿದರು.
ಪಕೋಡ ಮಾರಿ ಅನ್ನೋಕೆ ಪ್ರಧಾನಿ ಆದ್ರಾ?
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ಸುಳ್ಳು ಹೇಳಿದ್ರು. ಪಾಪ ಭಾರತದ ಯುವಕ ಯುವತಿಯರು ಮೋದಿ ಮಾತನ್ನು ನಂಬಿಬಿಟ್ಟಿದ್ದರು. ನಂಬಿದ ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂತ ಮೋದಿ ಹೇಳಿದ್ರು. ನಿರುದ್ಯೋಗಿಗಳಿಗೆ ಪಕೋಡ ಮಾರಾಟ ಮಾಡಿ ಅಂತ ಹೇಳೋಕೆ ನೀವು ಪ್ರಧಾನಿ ಆದ್ರಾ ಎಂದು ಖಾರವಾಗಿ ಪ್ರಶ್ನಿಸಿದರು.
ಮೋದಿ ಅಂಬಾನಿ ಅದಾನಿ ಸಾಲ ಮನ್ನಾ ಮಾಡಿದ್ರು. ನಾವು ಇಡಿ ದೇಶದ ರೈತರ ಸಾಲ ಮನ್ನಾ ಮಾಡ್ತೀವಿ
ಅಂಬಾನಿ-ಅದಾನಿ ಸೇರಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರು ರೈತರ ಸಾಲ ಮಾತ್ರ ಮನ್ನಾ ಮಾಡಲಿಲ್ಲ. ನಾವು ಇಡಿ ದೇಶದ ರೈತರ ಸಾಲ ಮನ್ನಾ ಮಾಡ್ತೀವಿ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಗ್ಯಾರಂಟಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲ ಮನ್ನಾ ಮಾಡ್ತೀವಿ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು ಎಂದು ನೆನಪಿಸಿದರು.
ಇದಲ್ಲದೆ ಪ್ರತೀ ಮನೆಯ ಮನೆಯ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅವರ ಖಾತೆಗೆ ಜಮೆ ಮಾಡುತ್ತೇವೆ.
ಬಡವರ ಮತ್ತು ಮಧ್ಯಮ ವರ್ಗದವರ ಕೊಳ್ಳುವ ಶಕ್ತಿ ಹೆಚ್ಚಾಗಲಿ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ 5 ಗ್ಯಾರಂಟಿ ಜಾರಿ ಮಾಡಿ ಆಗೋಯ್ರು. ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಘೋಷಿಸಿರುವ 25 ಗ್ಯಾರಂಟಿಗಳು ಜಾರಿಯಾಗಿ ನಿಮ್ಮ ಕುಟುಂಬಗಳ ಜೇಬಿಗೆ ಲಕ್ಷ ರೂಪಾಯಿಗಳು ಜಮೆ ಆಗಲಿವೆ ಎಂದರು.
ನಾನು ಬಂದಿದ್ರೆ ಗೋಪಾಲಸ್ವಾಮಿ, ಶ್ರೇಯಸ್ ಪಟೇಲ್ ಗೆಲ್ತಿದ್ರು
ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ನನಗೆ ಬರಲಾಗಲಿಲ್ಲ. ನಾನು ಬಂದಿದ್ದಿದ್ರೆ ಚನ್ನರಾಯಪಟ್ಟಣದಲ್ಲಿ ಗೋಪಾಲಸ್ವಾಮಿ, ಹೊಳೆನರಸೀಪುರದಲ್ಲಿ ಶ್ರೇಯಸ್ ಪಟೇಲ್ ಕೂಡ ಗೆಲ್ತಿದ್ರು. ಗೋಪಾಲಸ್ವಾಮಿ ಮುಂದಿನ ಬಾರಿ ಗೆಲ್ತಾರೆ. ಶ್ರೇಯಸ್ ಪಟೇಲ್ ಈ ಬಾರಿ ಗೆಲ್ತಾರೆ ಎಂದು ಸ್ಪಷ್ಟವಾಗಿ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಕಾಂಗ್ರೆಸ್ ಮುಖಂಡ ಗೋಪಾಲಸ್ವಾಮಿ ಉಪಸ್ಥಿತರಿದ್ದರು.