ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ 6ನೇ ತಾರೀಕಿನ ಒಳಗೆ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯುವಲ್ಲಿ ವಿಳಂಬ ನೀತಿ ಅನುಸರಿಸಿದರೆ, 6ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳುತ್ತೇವೆ. ಅಲ್ಲದೆ, ರಾಜ್ಯ ಸರಕಾರವನ್ನು ವಜಾ ಮಾಡಲು ಒತ್ತಾಯಿಸುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಮುಖ್ಯಮಂತ್ರಿಗಳನ್ನು ಎಚ್ಚರಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 6ರಂದು ಬಿಜೆಪಿ ನಿಯೋಗವು ಈ ಸಂಬಂಧ ರಾಜ್ಯಪಾಲರನ್ನು ಒತ್ತಾಯಿಸಲಿದೆ ಎಂದು ತಿಳಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಇದು ಮುಖ್ಯಮಂತ್ರಿಗಳ ಮೂಗಿನ ಅಡಿಯಲ್ಲಿ ನಡೆದ ಅಕ್ರಮವಾದ ವರ್ಗಾವಣೆ ಎಂದು ಆರೋಪಿಸಿದರು.
ಆರ್ಥಿಕ ಇಲಾಖೆಯ ಸಹಮತ ಇಲ್ಲದೇ ಇಷ್ಟು ದೊಡ್ಡ ಮೊತ್ತ ವರ್ಗಾವಣೆ ಆಗಲು ಸಾಧ್ಯವಿಲ್ಲ. ಚುನಾವಣೆಗಾಗಿ ತೆಲಂಗಾಣಕ್ಕೆ ಕರ್ನಾಟಕದ ಪರಿಶಿಷ್ಟ ಪಂಗಡದವರ ಹಣ ವರ್ಗಾಯಿಸಿದ ಆರೋಪ ಇದೆ. ಕೂಡಲೇ ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಈ ಸರಕಾರವನ್ನು, ಮಾನ್ಯ ಸಿದ್ದರಾಮಯ್ಯನವರನ್ನು ಒತ್ತಾಯ ಮಾಡಿ ಗಡುವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರಿಗೂ ಅಕ್ರಮ ವರ್ಗಾವಣೆಯ ಮಸಿ..
ಖಜಾನೆ 2ರಿಂದ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗಬೇಕಿತ್ತು. ಅದು ಹೇಗೆ ನಿಗಮಕ್ಕೆ ವರ್ಗಾವಣೆ ಆಗಿದೆ? ಆರ್ಥಿಕ ಇಲಾಖೆ ಅಧಿಕಾರಿಗಳು ಹೇಗೆ ಶಾಮೀಲಾದರು? ಆರ್ಥಿಕ ಇಲಾಖೆ ಅಧಿಕಾರಿಗಳು ಯಾರ ಸೂಚನೆ ಮೇರೆಗೆ ಈ ವರ್ಗಾವಣೆ ಮಾಡಿದ್ದಾರೆ? ಈ ಅಕ್ರಮ ವರ್ಗಾವಣೆಯ ಮಸಿ ಸಿದ್ದರಾಮಯ್ಯನವರಿಗೂ ಕೂಡ ಬಳಿದುಕೊಂಡಿದೆ ಎಂದು ಪಿ.ರಾಜೀವ್ ಅವರು ಆರೋಪಿಸಿದರು.
ಎಸ್‍ಐಟಿಯಿಂದ ಈ ಮಸಿ ಒರೆಸಿಕೊಳ್ಳಲು ಸಾಧ್ಯವೇ? ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳು ನಿಮ್ಮನ್ನು ಕರೆದು ವಿಚಾರಣೆ ಮಾಡಲು ಸಾಧ್ಯವಿದೆಯೇ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ಸಿಎಂ ಅವರು ಈ ಹಗರಣದ ಪಾಲುದಾರ ತಾವಲ್ಲ ಎಂದು ರಾಜ್ಯದ ಜನತೆಗೆ ತೋರಿಸಲು ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಚುನಾವಣೆಗೆ ಬಳಸಲೆಂದೇ ಈ ಹಣವನ್ನು ಕಳಿಸಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಹೈಕಮಾಂಡಿಗೆ ಮುಟ್ಟಿಸಲೆಂದೇ ಈ ಹಣವನ್ನು ಬಳಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳ ನಿಗಾದ ಅಡಿಯಲ್ಲಿ ಈ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಅವರು ವಿವರಿಸಿದರು.
ಮಳೆ ಹಾನಿ ತಡೆಯಲು ಸರ್ವಸನ್ನದ್ದರಾಗಿ: ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ