ಉಡುಪಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ವಿಧಾನದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ವಾರ್ಷಿಕ ದಿನ ಮತ್ತು ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಅವರು, ಶೈಕ್ಷಣಿಕ ಸಾಧನೆಗೆ ಪೂರಕವಾದ ಮಾತುಗಳನ್ನಾಡಿ ಗಮನಸೆಳೆದರು. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವೆನಿಸಿರುವ ಕರ್ನಾಟಕ ರಾಜ್ಯ ಕಾನೂನು ವಿವಿ ಇದೀಗ ಪದವಿ ಶಿಕ್ಷಣದಲ್ಲಿ ಪರಿವರ್ತನೆ ತಂದಿದ್ದು, ದೇಶಾದ್ಯಂತ ಇರುವ ಕಾನೂನು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಲಹೆಗಳನ್ನು ಆಧರಿಸಿ ಪಠ್ಯ ಕ್ರಮ ಹಾಗೂ ಪರಿಕ್ಷಾ ಪದ್ದತಿಯನ್ನು ಅಳವಡಿಸಲಾಗಿದೆ ಎಂದು ಡಾ.ಸಿ.ಬಸವರಾಜು ತಿಳಿಸಿದರು.
ಪರೀಕ್ಷಾ ಹಂತದಲ್ಲಿ ಸುರಕ್ಷಾ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಅಕ್ರಮಗಳನ್ನು ತಡೆಯಲು ಹೆಂದೆಂದಿಗಿಂತಲೂ ಹೆಚ್ಚಿನ ಬಿಗಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಮೂಲಕ, ನ್ಯಾಯವಾದಿಗಳಾಗುವ, ಕಾನೂನು ಪಂಡಿತರಾಗುವ ಕನಸು ಹೊತ್ತರುವ ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ಹಂಚಿಕೊಂಡರು.
ವಿಸಿಯಿಂದ ನೀತಿ ಪಾಠ:
ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಮಾನವೀಯ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಮ್ಮದೇ ಶೈಲಿಯಲ್ಲಿ ನೀತಿ ಪಾಠ ಹೇಳಿದ ಕುಲಪತಿ ಬಸವರಾಜು ಅವರು ಕಾನೂನು ವಿದ್ಯಾರ್ಥಿಗಳ ಮುಂದೆ ಮೇಷ್ಟ್ರು ಆಗಿ ಕುತೂಹಲದ ಕೇಂದ್ರಬಿಂದುವಾದರು. ಕಾನೂನು ಶಿಕ್ಷಣವು ಸ್ವಯಂ ಅಭಿವೃದ್ಧಿಗಾಗಿ ಅಲ್ಲ, ಬದಲಾಗಿ ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕಾಗಿ ಇದೆ ಎಂದ ಅವರು, ಒಬ್ಬರ ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಾಂವಿಧಾನಿಕ ಮೌಲ್ಯಗಳ ಮಹತ್ವವನ್ನು ತಿಳಿದು, ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯವನ್ನು ದೊರಕಿಸಿಕೊಡುವ ಸೂತ್ರವನ್ನು ಅನುಸರಿಸಬೇಕಿದೆ ಎಂದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ, ಪ್ರಾಂಶುಪಾಲ ಡಾ. ರಘುನಾಥ್ ಸೇರಿದಂತೆ ಶಿಕ್ಷಣ ತಜ್ಞರನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
BREAKING: ರಾಜ್ಯದಲ್ಲಿಂದು ಐವರಿಗೆ ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ, ಓರ್ವ ಸಾವು | Corona Case
BIG NEWS: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಮೂವರು ಆತ್ಮಹತ್ಯೆ