ಮಂಡ್ಯ : ಮದ್ದೂರು ಪಟ್ಟಣದ ಪೇಟೆ ಬೀದಿಯ ಅಗಲೀಕರಣ ಸಂಬಂಧ ಸೆ.10 ರಂದು ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಪಟ್ಟಣದ ಪೇಟೆ ಬೀದಿಯನ್ನು ಶಾಸಕ ಕೆ.ಎಂ.ಉದಯ್ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದ ಪೇಟೆ ಬೀದಿ ಕಿರಿದಾಗಿರುವ ಕಾರಣ ವಾಹನ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಸ್ತೆಯನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳೊಳಗೆ ರಸ್ತೆ ಕಾಮಗಾರಿ ಸಂಬಂಧ ಡಿಪಿಆರ್ ಸಿದ್ಧವಾಗಲಿದೆ ಎಂದು ಹೇಳಿದರು.
ಪಟ್ಟಣದ ಪೇಟೆ ಬೀದಿಯು ಕೆಲವು ಕಡೆ 20,40 ಹಾಗೂ 60 ಅಡಿಗಳು ಇದ್ದು ಶಾಸಕ ಕೆ.ಎಂ.ಉದಯ್ ಅವರು 100 ಅಡಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ರಸ್ತೆ ವಿಸ್ತರಣೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣದ ಪೇಟೆ ಬೀದಿಯಲ್ಲಿ ಸಂಚಾರ ದುಸ್ತರವಾಗಿರುವ ಕಾರಣ 100 ಅಡಿಗೆ ವಿಸ್ತರಿಸಲು ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆಗೊಂಡ ತಕ್ಷಣ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಲೋಕೋಪಯೋಗಿ ಇಲಾಖೆ ಇಇ ಹರ್ಷ, ಎಇಇ ದೇವಾನಂದ್, ಅಭಿಯಂತರ ಹನುಮಂತು, ಪುರಸಭಾ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಪುರಸಭಾ ಸದಸ್ಯ ಸಚಿನ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಅ.7 ರಂದು ಅಗರಲಿಂಗನದೊಡ್ಡಿ ಸರ್ಕಾರಿ ಶಾಲೆ ಉದ್ಘಾಟನೆ: ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ