ಬೆಂಗಳೂರು: ಬಳ್ಳಾರಿಯ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಮನೆ ಮುಂದೆ ಕಾಂಗ್ರೆಸ್ಸಿನವರೇ ಗಲಾಟೆ ಮಾಡಿದ್ದಾರೆ. ಕಾಂಗ್ರೆಸ್ಸಿನವರ ಬಂದೂಕಿನಿಂದ ಒಬ್ಬರ ಹತ್ಯೆ ಆಗಿದೆ. ಆದರೆ, ಜನಾರ್ಧನ ರೆಡ್ಡಿ ಮೇಲೆ ಕೇಸ್. ಇದ್ಯಾವ ಪ್ರಜಾಪ್ರಭುತ್ವ? ಇದ್ಯಾವ ವ್ಯವಸ್ಥೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವದ ಆಡಳಿತ ನಡೆಸುತ್ತಿದ್ದಾರಾ? ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರಾ ಎಂದು ಕೇಳಿದರು. ಗಲಾಟೆ ಮಾಡಿದ ನಾರಾ ಭರತ್ ರೆಡ್ಡಿ ವಿರುದ್ಧ ಎಫ್‍ಐಆರ್ ಆಗಿಲ್ಲವೇಕೆ ಎಂದು ಅವರು ಆಕ್ಷೇಪಿಸಿದರು. ಕೇವಲ ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಮಾಡಿಲ್ಲವೇಕೆ ಎಂದು ಟೀಕಿಸಿದರು.
ನಾರಾ ಭರತ್ ರೆಡ್ಡಿಗೆ ರಕ್ಷಣೆ ನೀಡುವ ಆರೇಳು ಗನ್‍ಮ್ಯಾನ್‍ಗಳು ಬಳಸುತ್ತಿದ್ದ ಆರೇಳು ಬಂದೂಕುಗಳಿಂದ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಮನೆಗೆ ಶೂಟ್ ಮಾಡಿದ್ದಾರೆ. ಗ್ಲಾಸ್‍ಗಳು ಒಡೆದುಹೋಗಿವೆ. ಈ ಗನ್‍ಮ್ಯಾನ್‍ಗಳು ಬಳಸುತ್ತಿದ್ದ ಆರೇಳು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಜನಾರ್ಧನ ರೆಡ್ಡಿಯವರ ಮನೆ ಮುಂದೆ ಕಾಂಗ್ರೆಸ್ಸಿನ ಸಾವಿರಾರು ಜನರು ಶಾಸಕ ನಾರಾ ಭರತ್ ರೆಡ್ಡಿ ಜೊತೆ ಬಂದಿದ್ದಾರೆ. ಆಗ ದೊಡ್ಡ ಗಲಾಟೆಯೇ ಆಗಿದೆ ಎಂದು ವಿವರಿಸಿದರು. ಅವರ ಹಿಂಬಾಲಕರು, ಆಪ್ತ ಸಹಾಯಕರಾಗಿದ್ದವರು ಸೇರಿ ಇದನ್ನು ಮಾಡಿದ್ದಾರೆ ಎಂದು ದೂರಿದರು.
ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ..
ಕರ್ನಾಟಕದಲ್ಲಿ ಗೂಂಡಾರಾಜ್ಯ ನಡೆಯುತ್ತಿದೆ. ಕಾನೂನು- ಸುವ್ಯವಸ್ಥೆ ಎಂಬುದು ಸಂಪೂರ್ಣ ನೆಲಕಚ್ಚಿ ಹೋಗಿದೆ. ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇದರ ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಇದನ್ನು ನಿಮ್ಮ ಎಸ್‍ಐಟಿಗೆ ಕೊಟ್ಟರೆ, ಸಂಪೂರ್ಣವಾಗಿ ಕೇಸು ಮುಚ್ಚಿ ಹಾಕಿದಂತೆ ಆಗಲಿದೆ ಎಂದು ವಿಶ್ಲೇಷಿಸಿದರು.
ಪ್ರತಿಭಟನೆ ಹತ್ತಿಕ್ಕುವ ಸರಕಾರ..
ಬೆಂಗಳೂರು – ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಕಳೆದ 107 ದಿನಗಳಿಂದ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ಎಫ್.ಐ.ಆರ್. ದಾಖಲಿಸಿರುವುದು ಹಾಗೂ ರಾತ್ರೋರಾತ್ರಿ ಪ್ರತಿಭಟನಾ ಸ್ಥಳದ ಪೆಂಡಾಲ್ ತೆಗೆದಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ, ಇದು ಪ್ರತಿಭಟನೆಯನ್ನು ಹತ್ತಿಕ್ಕುವ ಸರಕಾರ ಎಂದು ಖಂಡಿಸಿದರು.
ಈ ರಾಜ್ಯದಲ್ಲಿ ನ್ಯಾಯಕ್ಕಾಗಿ ಯಾರೂ ಕೂಡ ಪ್ರತಿಭಟನೆ ಮಾಡಬಾರದು, ಮಾಡಿದರೆ ಈ ಸರ್ಕಾರ ಅವರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಎಫ್.ಐ.ಆರ್. ದಾಖಲಿಸಿ, ಬಂಧಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಈ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಬಗ್ಗೆ ಕೂಡಲೇ ಸರಕಾರ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನಾನಿರತ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.








