ಬೆಂಗಳೂರು : “ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪು ಮಾಡಿರುವುದು ಬ್ಯಾಂಕ್ ಮ್ಯಾನೇಜರ್. ಇದಕ್ಕೆ ಸಿದ್ದರಾಮಯ್ಯ ಅವರು ಏಕೆ ರಾಜೀನಾಮೆ ಕೊಡಬೇಕು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು “ಹಗರಣಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧವಿದೆ? ಅಧಿಕಾರಿ ತಪ್ಪು ಮಾಡಿದರೆ ಮುಖ್ಯಮಂತ್ರಿಗಳು ಜವಾಬ್ದಾರರಾಗುತ್ತಾರೆಯೇ? ಬ್ಯಾಂಕ್ ಅಧಿಕಾರಿ ಒಂದೇ ದಿನದಲ್ಲಿ ಆರೋಪಿಗಳಿಗೆ ಸಾಲ ಮಂಜೂರು ಮಾಡಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ?” ಎಂದು ಖಡಕ್ಕಾಗಿ ಉತ್ತರಿಸಿದರು.
ಪ್ರತಿಪಕ್ಷಗಳಿಗೆ ಸದನದ ಕಲಾಪಗಳು ನಡಾವಳಿಗಳ ತಿಳುವಳಿಕೆಯಿಲ್ಲ. ಅವರಿಗೆ ನಾವು ಮಾತನಾಡಲು ಅವಕಾಶ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಆದರೆ ನೀಡಿಲ್ಲ. ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿದ್ದು, ನಮಗೂ ರಾಜಕೀಯ ಮಾಡಲು ಬರುತ್ತದೆ” ಎಂದರು.
ನಾವು ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದು, ಇದನ್ನು ರಾಜಕೀಯವಾಗಿ ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಎಸ್ ಐಟಿ ರಚನೆ ಮಾಡಿದ್ದೇವೆ. ಇಡಿ, ಸಿಬಿಐನಿಂದ ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದರು.
ಅಧಿಕಾರಗಳು ಮಾಡಿದ ತಪ್ಪಿಗೆ ಮುಖ್ಯಮಂತ್ರಿಗಳನ್ನು ಗುರಿ ಮಾಡುವುದು ತಪ್ಪು. ದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ ಯಾರೋ ನೌಕರ ಕ್ರಿಮಿನಲ್ ತಪ್ಪು ಮಾಡುತ್ತಾನೆ, ಅದಕ್ಕೆ ಕಂಪನಿಯ ಮುಖ್ಯಸ್ಥನನ್ನು ಗುರಿ ಮಾಡಲು ಆಗುತ್ತದೆಯೇ?” ಎಂದು ತಿರುಗೇಟು ನೀಡಿದರು.
ದೇಶದ ಇತಿಹಾಸವನ್ನು ಬರೆಯಬೇಕಾದಂತ ‘ಮಾಧ್ಯಮ’ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಚಿಂತಕ ಶಿವಸುಂದರ್ ಕಳವಳ