ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸಚಿವ ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ? ಈ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಇಷ್ಟೆಲ್ಲ ಆದರೂ ಸರಕಾರಕ್ಕೆ ಇದೊಂದು ಗಂಭೀರ ಪ್ರಕರಣ ಅನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಬುಡಕ್ಕೆ ಬರುವ ಕಾರಣಕ್ಕೆ ಇದು ಗಂಭೀರವಲ್ಲ ಎಂದು ತೇಲಿಸುವ ರೀತಿಯಲ್ಲಿ ಸರಕಾರ ವ್ಯವಹರಿಸುತ್ತಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿದ್ದಾರೆ. ಜೊತೆಗೇ 3 ಅಧಿಕಾರಿಗಳ ಹೆಸರು, ಎನ್ ನಾಗರಾಜ್ ಎಂಬ ಹೆಸರು ಬರೆದಿದ್ದಾರೆ. ಎನ್. ನಾಗರಾಜ್ ಯಾರು ಎಂದು ಪ್ರಶ್ನಿಸಿದರು.
ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆ ಶಾಖೆಗೆ ಖಾತೆ ಬದಲಿಸುವ ಮೂಲಕ ಈ ಹಗರಣ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದೇ ವಸಂತನಗರದಲ್ಲಿ. ಕಾಲ್ನಡಿಗೆ ದೂರದಲ್ಲಿ ಶಾಖೆ ಇದೆ. ಯಾಕೆ ನೀವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‍ಗೆ ಖಾತೆ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸಿದರು.
ಉಳಿದ ನಿಗಮಗಳಲ್ಲೂ ಇಂಥ ಹಗರಣ…
ಈಗ ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದಿದೆ. ಉಳಿದ ನಿಗಮಗಳಲ್ಲೂ ಇಂಥ ಹಗರಣ ಆಗಿರುವ ಸಾಧ್ಯತೆ ಇದೆ ಎಂದು ಸಿ.ಟಿ. ರವಿ ಅವರು ಸಂಶಯ ವ್ಯಕ್ತಪಡಿಸಿದರು.
ಎಲ್ಲ ಅಭಿವೃದ್ಧಿ ನಿಗಮಗಳ ಲೆಕ್ಕಪತ್ರ ಪರಿಶೀಲನೆ ನಡೆಸಬೇಕು. ಎಷ್ಟೋ ನಿಗಮಗಳಿಂದ 2-3 ವರ್ಷವಾದರೂ ಫಲಾನುಭವಿಗಳಿಗೆ ಬೋರ್‍ವೆಲ್ ಕೊರೆದಿಲ್ಲ. ಸಬ್ಸಿಡಿ ಹಣ ಬಂದಿಲ್ಲ. ವೈಯಕ್ತಿಕ ಸಾಲ ಸೌಲಭ್ಯಕ್ಕೆ ಆಯ್ಕೆ ಆಗಿದ್ದರೂ ಸಾಲ ಸಿಕ್ಕಿಲ್ಲ. ಇಂಥ ಹಣ ನಕಲಿ ಖಾತೆಗಳ ಪಾಲಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ನಿಗಮದ ಬೇರೆ ಬೇರೆ ಖಾತೆಯಲ್ಲಿದ್ದ ಹಣವನ್ನು ಯೂನಿಯನ್ ಬ್ಯಾಂಕ್ ಖಾತೆಗೆ ಯಾಕೆ ವರ್ಗಾಯಿಸಲಾಯಿತು? ಯೂನಿಯನ್ ಬ್ಯಾಂಕಿನಿಂದ ಹೈದರಾಬಾದ್‍ನ ರತ್ನಾಕರ ಬ್ಯಾಂಕಿಗೆ ಹಣ ಹೋಗಿದೆ. ಅಲ್ಲಿಂದ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಖಾತೆಗಳನ್ನು ತೆರೆದು ಹಣ ಹಿಂಪಡೆದಿದ್ದಾರೆ ಎಂದು ಆಕ್ಷೇಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್: ಸಿಎಂ, ಸಚಿವರ ರಾಜೀನಾಮೆಗೆ ಆರ್.ಅಶೋಕ್ ಆಗ್ರಹ