ಬೆಂಗಳೂರು: ಕಾನೂನುಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೆ ಬಿಜೆಪಿ ಹಾಗೂ ಸಂಘಪರಿವಾರ, ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಹೆದರುತ್ತಿರುವುದೇಕೆ? ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿ ನಾಯಕರು ಸಂಘ ಪರಿವಾರದ ಹೆಸರನ್ನು ಬಳಸಿ ಅತಿರೇಕದ ಟೀಕೆ ಮಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಅವರಿಗೆ ಬರೆದ ಪತ್ರ ಹಾಗೂ ಡಿಸಿಎಂ ಅವರು ಶಾಸಕರನ್ನು ಕರೆದದ್ದನ್ನು ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದಾರೆ. ಅವರೆಲ್ಲರೂ ಸಂಘ ಪರಿವಾರದಲ್ಲಿ ಕಲಿತವರು. ಅವರು ಬಳಸುತ್ತಿರುವ ಭಾಷೆ ಅಲ್ಲೇ ಕಲಿತಿದ್ದಾರೆ. ಮುನಿರತ್ನ ಅವರಿಗೆ ಅಥಿಯಾದ ವಿಶ್ವಾಸ ಸಂಘಪರಿವಾರದ ಬಗ್ಗೆ ಇದೆ. ಹೀಗಾಗಿ ಅವರು ಸಂಘ ಪರಿವಾರದ ಚಡ್ಡಿ ಹಾಕಿರುವ ಫೋಟೋ ಇಲ್ಲ. ಅದನ್ನು ಹಾಕಬೇಕು ಎಂದು ತಿಳಿಸಿದರು. ಮಾಧ್ಯಮಗಳ ಮೂಲಕ ಪ್ರಚಾರ ಸಿಗಲಿ ಎಂದು ಮುನಿರತ್ನ ಅವರು ತಹ ಪ್ರಚಾರ ಮಾಡುತ್ತಲೇ ಬಂದಿದ್ದಾರೆ ಎಂದಿದ್ದಾರೆ.
ಸಂಘ ಪರಿವಾರದಿಂದ ಬಿಜೆಪಿ ನಾಯಕರು ಸಭ್ಯತೆ ಕಲಿತಿದ್ದರೆ, ಸಚಿವ ಪ್ರಿಯಾಂಕ್ ಖರ್ಗೆ ಅವರು 4ರಂದು ಸಿಎಂಗೆ ಪತ್ರ ಬರೆದಿರುವುದರ ಬಗ್ಗೆ ಚರ್ಚೆಯಾಗಲಿ ಎಂದು ಹೇಳಬೇಕು. ಸಂಘ ಪರಿವಾರದಿಂದಲೇ ಬೆಳೆದಿರುವುದಾಗಿ ಹೇಳಿಕೊಳ್ಳುವ ಅಶೋಕ್, ಬಿಜೆಪಿ ಶಾಸಕರಿಂದಲೇ 20 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ವಿಜಯೇಂದ್ರ ಅವರು, ಚೀಟಿ ರವಿ ಎಂದೇ ಖ್ಯಾತೆ ಪಡಿದಿರುವ ಸಿ.ಟಿ ರವಿ, ಅರಕುಬಾಯಿ ಪ್ರತಾಪ್ ಸಿಂಹ, ಮಾಜಿ ಸಚಿವ ಅಶ್ವತ್ ನಾರಾಯಣ, ಪಿ.ರಾಜು, ಸಿಸಿ ಪಾಟೀಲ್, ಯತ್ನಾಳ್, ಕೆ.ಎಸ್ ಈಶ್ವರಪ್ಪ ಅವರು ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮುಗಿಬಿದ್ದಿದ್ದಾರೆ ಎಂದು ಗುಡುಗಿದ್ದಾರೆ.
ಪ್ರಿಯಾಂಕ್ ಅವರಿಗೆ ಕಳೆದ ಎರಡು ಮೂರು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಇಂತಹವರಿಗೆ ಈ ನಾಯಕರ ಹೇಳಿಕೆಗಳು ಪ್ರಚೋದನೆ ನೀಡುತ್ತಿವೆ. ಕಚ್ಚೆಹರುಕ ಎಂದೇ ಖ್ಯಾತಿ ಪಡೆದಿರುವ ಸಿ.ಸಿ ಪಾಟೀಲ್ ಅವರು ಪ್ರಿಯಾಂಕ್ ಖರ್ಗೆ ವರ ವಿರುದ್ಧ ಏಕವಚನದಲ್ಲಿ ಟೀಕೆ ಮಾಡಿದ್ದಾರೆ. ಇವರು ಕಾಂಗ್ರೆಸ್ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಇನ್ನು ಪ್ರತಾಪ್ ಸಿಂಹ ಅವರಿಗೆ ಕೂಗುಮಾರಿ ಎಂದು ಕರೆಯಬಹುದು. ಅವರು ನ್ಯಾಯಲಯದಲ್ಲಿ ಯಾವ ಕಾರಣಕ್ಕೆ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹವರು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುತ್ತಾರೆ. ಇನ್ನು ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಚಿವರ ಬಗ್ಗೆ ಕೀಳು ಪದ ಬಳಕೆ ಮಾಡಿದ ಸಿ.ಟಿ ರವಿ ಅವರು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ದಲಿತ ಎಂಬ ಪದ ಬಳಸುವಂತಿಲ್ಲ ಎಂದು ಹೇಳಿರುವ ಛಲವಾದಿ ನಾರಾಯಣಸ್ವಾಮಿ ಅವರೇ ನೀವು ದಲಿತ ಸಮುದಾಯದಲ್ಲಿ ಇದ್ದೀರಾ? ನೀವು ಯಾರು ಎಂದು ಸಂದರ್ಭ ಬಂದಾಗ ದಾಖಲೆ ಸಮೇತ ಜನರ ಮುಂದಿಡುತ್ತೇನೆ. ಕೀಳು ಅಭಿರುಚಿಯನ್ನು ನೀವು ಸಂಘಪರಿವಾರದಿಂದ ಕಲಿತಿದ್ದರೆ ಅದು ನಿಮ್ಮ ಹಣೆಬರಹ. ನಿಮ್ಮಿಂದ ಪ್ರಿಯಾಂಕ್ ಖರ್ಗೆ ಅವರು ಹಾಗೂ ಕಾಂಗ್ರೆಸ್ ಪಕ್ಷ ಕಲಿಯುವಂತಹದ್ದು ಏನೂ ಇಲ್ಲ. ನೀವು ಪ್ರಿಯಾಂಕ್ ಖರ್ಗೆ ಅವರ ಪತ್ರವನ್ನು ಓದಿ, ನೀವು ಕಾನೂನು ಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಮಾತ್ರ ಆ ಪತ್ರಕ್ಕೆ ಹೆದರಬೇಕು. ಸರ್ಕಾರಿ, ಅರೆಸರ್ಕಾರಿ, ಸಾರ್ವಜನಿಕ ಸ್ಥಳಗಳನ್ನು ಕೋಮುದ್ವೇಷ ಪ್ರಚೋದಿಸಲು ಬಳಸುತ್ತಿದ್ದೀರಿ ಎಂದು ದೂರು ಬಂದಿದ್ದು, ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ. ಸಿಎಂ ಅವರೂ ಕೂಡ ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ವರದಿ ಬರುವ ಮುನ್ನವೇ ಬಿಜೆಪಿಗರ ಅಟಾಟೋಪ ಹೆಚ್ಚಾಗಿದೆ. ಮೈಸೂರಿನ ಮಹೇಶ್ ಎಂಬುವವರು ನಾವು 20 ರಾಜ್ಯದಲ್ಲಿದ್ದೇವೆ ಎಂದು ಹೇಳುತ್ತಾರೆ. ಈ ದೇಶದಲ್ಲಿ ಮೊದಲು ಆರ್ ಎಸ್ಎಸ್ ಅನ್ನು ಬಹಿಷ್ಕಾರಕ್ಕೆ ಒಳಪಡಿಸಿದ್ದು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಗೃಹಸಚಿವರಾಗಿದ್ದಾಗ ಎಂದು ಹೇಳಿದ್ದಾರೆ.
1948-49, 1975-77, ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಿಷೇಧ ಹೇರಲಾಗಿತ್ತು. ಸಂಘ ಪರಿವಾರ ಈ ಹಿಂದೆ ನಿಷೇಧಕ್ಕೆ ಒಳಪಟ್ಟಿತ್ತೋ ಇಲ್ಲವೋ ಎಂಬುದು ಮುಖ್ಯವೇ ಹೊರತು, ನೀವು ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೀರಿ ಎಂಬುದು ಮುಖ್ಯವಲ್ಲ. ಕಾನೂನು ಬಾಹೀರ ಚಟುವಟಿಕೆ ಮಾಡುವುದಕ್ಕೆ ಆರ್ ಎಸ್ಎಸ್ ಮಾತ್ರವಲ್ಲ, ಯಾವುದೇ ಸಂಘಟನೆಗೆ ಅವಕಾಶವಿಲ್ಲ. ನೀವೆಲ್ಲರೂ ನಾತುರಾಮ್ ಗೋಡ್ಸೆ ಅವರ ವಂಶಸ್ಥರು. ಅವರ ಡಿಎನ್ಎ ನಿಮ್ಮಲಿದೆ. ಕೊಲೆ ಬೆದರಿಕೆ ಹಾಕುವ ಪರಿಪಾಠ ನಿಮ್ಮಲ್ಲಿದೆ ಎಂದು ಕಿಡಿಕಾರಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತೆತ್ತಿದರೆ ಕೊಲೆಗಡುಕ ಸರ್ಕಾರ, ಈ ಸರ್ಕಾರಕ್ಕೆ ಧಮ್, ತಾಕತ್ತಿಲ್ಲ ಎಂಬ ಪದಬಳಕೆ ಮಾಡಿ ಆರೋಪ ಮಾಡುತ್ತಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವೈಫಲ್ಯ ಹೊಂದಿರುವ ನಾಯಕ ಎಂದು ತಿಳಿಸಿದರು. ಅಶೋಕ್ ಅವರು ಸರ್ಕಾರಿ ಜಮೀನಿನಲ್ಲಿ ಎರಡೂವರೆ ಸಾವಿರ ಎಕರೆ ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಅವರ ಮೇಲಿದೆ. ಅವರು ಚುನಾವಣೆ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿ ಲೋಕಾಯುಕ್ತದಲ್ಲಿ ತಾವೇ ಅರ್ಜಿ ಹಾಕಿಕೊಂಡಿರುವ ಬಾಕಿ ಪ್ರಕರಣಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ವಿಧಾನಸಭೆಯಲ್ಲಿ ಜನರ ಪರವಾಗಿ ಮಾತನಾಡುವುದನ್ನು ಬಿಟ್ಟು ರೇವಣ್ಣ ಅವರೇ ನಿಂಬೆಹಣ್ಣು ತನ್ನಿ ಸರ್ಕಾರ ತೆಗೆಯೋಣ ಎಂದು ಮಾತನಾಡುತ್ತಾರೆ. ಇಂತಹ ವ್ಯಕ್ತಿ ಈ ರಾಜ್ಯದ ವಿರೋಧ ಪಕ್ಷದ ನಾಯಕನಾಗಿರುವುದು ರಾಜ್ಯದ ದುರ್ದೈವ. ಬಿಜೆಪಿಗೆ ಅಶೋಕ್ ರಂತಹ ವ್ಯಕ್ತಿತ್ವದ ನಾಯಕರನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿರಬಹುದು. ಇಂತಹವರು ನಿಮ್ಮ ನೆಹರೂ, ಇಂದಿರಾ ಗಾಂಧಿ ಏನು ಮಾಡಲು ಆಗಿಲ್ಲ ಎಂದು ಹೇಳುತ್ತಾರೆ ಎಂದರು.
ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಕರೆಯುತ್ತಾರೆ. ಅವರು ವಿರೋಧ ಪಕ್ಷದ ನಾಯಕರಾಗಿ ಜನರ ಪರವಾಗಿ ಮಾತನಾಡದೇ, ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಅಸ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಅವರ ಮೇಲೆ ಎಂತಹ ಗಂಭೀರ ಆರೋಪ ಬಂದಿದೆ ಎಂದು ಜನ ನೋಡಿದ್ದಾರೆ. ಅವರು ಇದರ ಬಗ್ಗೆ ಸಮರ್ಥವಾಗಿ ಉತ್ತರ ನೀಡಲು ಸಾಧ್ಯವಿಲ್ಲ. ಇವರೆಲ್ಲ ಮುಗಿಬಿದ್ದರೆ ನಾವು ಹೆದರುವುದಿಲ್ಲ. ಕೇಶವ ಕೃಪದಲ್ಲಿ ಇಂದು, ನಿನ್ನೆ, ಮೊನ್ನೆ ಎಷ್ಟು ಹೊತ್ತಿಗೆ ಬೈಠಕ್ ಆಗಿದೆ. ಯಾವ ನಾಯಕರಿಗೆ ಯಾವ ಸೂಚನೆ ಹೋಗಿದೆ ಎಂದು ನಮಗೂ ಮಾಹಿತಿ ಇದೆ. ಹೀಗಾಗಿ ಬಿಜೆಪಿ ಶಾಸಕರಿಗೆ ಮಾತನಾಡುವುದು ಅನಿವಾರ್ಯ. ಮುನಿರತ್ನ, ಸಿಸಿ ಪಾಟೀಲ್, ಪ್ರತಾಪ್ ಸಿಂಹ ಅಂತಹವರನ್ನು ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿಸುವುದು ಬಿಜೆಪಿಗೆ ಹಾಗೂ ಸಂಘ ಪರಿವಾರಕ್ಕೆ ಅನಿವಾರ್ಯ. ಬಿಜೆಪಿ ನಾಯಕರು ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತಾರೆ. ಅವರಿಗೆ ಜಗನ್ನಾಥರ ಹೆಸರಿನಲ್ಲಿರುವ ವ್ಯಕ್ತಿತ್ವ, ಆದರ್ಶದ ಬಗ್ಗೆ ಮಾಹಿತಿ ಇಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು, ಅವರು ಎಂದಿಗೂ ವ್ಯಕ್ತಿಗತ ಟೀಕೆ ಮಾಡಿಲ್ಲ. ಅವರಿಂದಲೂ ನೀವು ಕಲಿಯುತ್ತಿಲ್ಲ. ನಿಮಗೆ ಸಂಘ ಪರಿವಾರದಿಂದ ಇದೇ ಭಾಷೆ ಬಳಸಬೇಕು ಎಂದು ಸಂಘಪರಿವಾರದಿಂದ ಸೂಚನೆ ಬಂದಿದೆಯೇ? ಎಂದು ಕೇಳಿದರು.
ಬಿಜೆಪಿ ನಾಯಕರು ಮೊದಲು ಪ್ರಿಯಾಂಕ್ ಖರ್ಗೆ ಅವರ ಪತ್ರವನ್ನು ಓದಲಿ. ನೀವು ಸಂಘದ ಹೆಸರಿನಲ್ಲಿ ಸರ್ಕಾರಿ ಸ್ಥಳಗಳಲ್ಲಿ ಕೋಮುದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರೆ ಆಗ ನೀವು ಕಾನೂನಿಗೆ ಹೆದರಬೇಕಾಗುತ್ತದೆ. ಅದನ್ನು ಹೊರತಾಗಿ ದಮ್ಮು, ತಾಕತ್ತು ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಬಿಜೆಪಿಯವರು ಎಂದಿಗೂ ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರ ಮಾಡಿಲ್ಲ. ಕಳ್ಳದಾರಿಯಲ್ಲಿ ಬಂದು ಅಧಿಕಾರ ಮಾಡಿದ್ದೀರ ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕ ಕಪ್ಪು ಬಣ್ಣದ ಟೋಪಿ ಹಾಕಿದ್ದಾಗ ಡಿಸಿಎಂ ಅವರು ಕರಿ ಟೋಪಿ ಶಾಸಕರೇ ವೇದಿಕೆ ಮೇಲೆ ಬನ್ನಿ ಎಂದು ಕರೆದಿದ್ದಾರೆ. ಕಪ್ಪು ಟೋಪಿ ಹಾಕಿರುವವರನ್ನು ಕರೀ ಟೋಪಿ ಎನ್ನದೇ ಕೆಂಪು ಟೋಪಿ ಎನ್ನಲು ಸಾಧ್ಯವೇ? ಅವರು ನಾಳೆ ಕೆಂಪು ಹಾಕಿದರೆ ಕೆಂಪು ಟೋಪಿ ಅಂತಲೇ ಕರೆಯಬಹುದು. ಅವರು ಯಾವ ದಿನ ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಾಣ ಬೆದರಿಕೆ ಹಾಕುವವರಿಗೆ ಪ್ರಚೋದನೆ ನೀಡುವ ಕೆಲಸವನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು. ಗಾಂಧಿ ಹತ್ಯೆ ಮಾಡಿದಾಗಿನಿಂದ ಇಲ್ಲಿಯವರೆಗೆ ಸಂಘ ಪರಿವಾರದ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಲೇ ಬಂದಿದೆ. ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದಾಗ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಪ್ರಶ್ನೆ ಮಾಡಬೇಕು ಎಂದರು.
ಪ್ರಿಯಾಂಕ್ ಖರ್ಗೆ ಹಾಗೂ ವರ ಕುಟುಂಬವನ್ನು ಹೆದರಿಸುವ ಕೆಲಸವನ್ನು ಬಿಡಬೇಕು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷದಿಂದ ಯಾವ ಕ್ರಿಮಿನಲ್ ಗೆ ಟಿಕೆಟ್ ನೀಡಿದ್ದಿರಿ, ಆತ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಸುತ್ತ ಸುತ್ತು ಹಾಕಿ ಅವರ ಕುಟುಂಬ ಮುಗಿಸುವುದಾಗಿ ಬೆದರಿಕೆ ಹೇಳಿಕೆ ನೀಡಿದ್ದ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ಇಂದು ಸೊರಬದ ಉಳವಿಯಲ್ಲಿ ಎರಡು ದುರ್ಘಟನೆ, ಇಬ್ಬರಿಗೆ ಗಂಭೀರ ಗಾಯ
Good News ; ‘RBI’ನಿಂದ ‘e₹’ ಅನಾವರಣ ; ಈಗ ಇಂಟರ್ನೆಟ್ ಅಗತ್ಯವಿಲ್ಲ, ಒಂದೇ ಕ್ಲಿಕ್’ನಲ್ಲಿ ‘ಪಾವತಿ’