ಬೆಂಗಳೂರು: ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಅದಾನಿಯನ್ನು ಬಂಧಿಸಿ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ಆಗ್ರಹಿಸಿದರು.
ಮೈಸೂರು ವಿಮಾನನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹರಾಜಾಗುತ್ತಿದೆಯಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ?
ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ ಎಂದರು.
ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಅನ್ಯಾಯ ಸರಿ ಎಂದು ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದ ರೈತರಿಗೆ ಕೇಂದ್ರ ಅನ್ಯಾಯ ನಾಡಿದ್ದು ಸರಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರೆ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿಯವರು ಉಸಿರೇ ಬಿಡ್ತಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದರು.
ವರ್ಷದಿಂದ ವರ್ಷಕ್ಕೆ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ.
ರೈತರಿಗೆ ಶೇ4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿ ಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದು ಸವಾಲು ಹಾಕಿದರು.
BREAKING : ಬೆಂಗಳೂರಲ್ಲಿ ಸಿಸಿಬಿ ಮತ್ತೊಂದು ಕಾರ್ಯಾಚರಣೆ : ಇಬ್ಬರು ವಿದೇಶಿ ಪೆಡ್ಲರ್ ಗಳ ಬಂಧನ