ಐಸ್ ಬಾತ್‌ಗಳಿಂದ (ಮಂಜುಗಡ್ಡೆಯ ನೀರಿನ ಸ್ನಾನ) ಹಿಡಿದು ಗ್ರೌಂಡಿಂಗ್ ಆಚರಣೆಗಳವರೆಗೆ (ನೆಲದೊಂದಿಗೆ ಸಂಪರ್ಕ ಹೊಂದುವ ಕ್ರಿಯೆ), ಆರೋಗ್ಯಕರ ಜೀವನಶೈಲಿಯ ಹಳೆಯ ಪದ್ಧತಿಗಳು ಇಂದು ಆಧುನಿಕ ರೂಪದೊಂದಿಗೆ ಮತ್ತೆ ಮುನ್ನೆಲೆಗೆ ಬರುತ್ತಿವೆ. ಈಗ ಅಂತರ್ಜಾಲದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಅಂತಹದ್ದೇ ಒಂದು ಹೊಸ ಅಭ್ಯಾಸವೆಂದರೆ ‘ಡಾರ್ಕ್ ಶವರಿಂಗ್’. ಅಂದರೆ, ಮಂದ ಬೆಳಕಿನಲ್ಲಿ ಅಥವಾ ಸಂಪೂರ್ಣ ಕತ್ತಲೆಯಲ್ಲಿ ಸ್ನಾನ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಪ್ರಶಾಂತಗೊಳಿಸುವುದು.
ಸರಳವಾಗಿ ಹೇಳುವುದಾದರೆ, ‘ಡಾರ್ಕ್ ಶವರಿಂಗ್’ ಎಂಬುದು ಕೇವಲ ದೀಪಗಳನ್ನು ಆರಿಸುವುದಲ್ಲ. ಇದೊಂದು ಇಂದ್ರಿಯಗಳ ಮರುಹೊಂದಾಣಿಕೆ ಇದ್ದಂತೆ. ಕಣ್ಣಿಗೆ ಕಾಣುವ ಗೊಂದಲಗಳನ್ನು ದೂರವಿರಿಸಿ, ನೀರಿನ ಬೆಚ್ಚಗಿನ ಅನುಭವ, ಸೋಪಿನ ಸುಗಂಧ ಮತ್ತು ನಿಮ್ಮ ಉಸಿರಾಟದ ಲಯದ ಕಡೆಗೆ ಗಮನ ಹರಿಸಲು ಇದು ಸಹಾಯ ಮಾಡುತ್ತದೆ.
ನಿದ್ರೆ ಮತ್ತು ಒತ್ತಡ ನಿವಾರಣೆಯಲ್ಲಿ ಇದು ನೈಜ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಸೂಚಿಸುತ್ತಾರೆ. ಬ್ರಿಟಿಷ್ ಸ್ಲೀಪ್ ಸೊಸೈಟಿಯ ಅಧ್ಯಕ್ಷರಾದ ಡಾ. ಅಲಿ ಹೇರ್ ಅವರು ಹೇಳುವಂತೆ, “ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಸ್ನಾನ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ ಮತ್ತು ನಿದ್ರೆಗೆ ಮುನ್ನ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದು ವ್ಯಕ್ತಿಯು ಬೇಗನೆ ನಿದ್ರಿಸಲು ಸಹಕಾರಿ.” ಅವರು ಮುಂದುವರಿಯುತ್ತಾ, “ಮಂದ ಬೆಳಕಿನಲ್ಲಿ ಸ್ನಾನ ಮಾಡುವುದು ದೇಹಕ್ಕೆ ನಿದ್ರೆಯ ಸಮಯವಾಗಿದೆ ಎಂಬ ಸಂಕೇತವನ್ನು ನೀಡುತ್ತದೆ. ಏಕೆಂದರೆ ಕಡಿಮೆ ಬೆಳಕು ನಿದ್ರೆಗೆ ಅಗತ್ಯವಾದ ‘ಮೆಲಟೋನಿನ್’ ಹಾರ್ಮೋನ್ ಬಿಡುಗಡೆಗೆ ಪ್ರಚೋದನೆ ನೀಡುತ್ತದೆ,” ಎಂದಿದ್ದಾರೆ.
ಇದು ದೈನಂದಿನ ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ನಿದ್ರಾಹೀನತೆ ಅಥವಾ ಒತ್ತಡದಿಂದ ಬಳಲುತ್ತಿರುವವರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕತ್ತಲೆಯಲ್ಲಿ ಸ್ನಾನ ಮಾಡುವುದು ಮತ್ತು ಮೆಲಟೋನಿನ್ ಬಿಡುಗಡೆಯ ನಡುವಿನ ಸಂಬಂಧವೇನು?
ಪಿಎಸ್ಆರ್ಐ (PSRI) ಆಸ್ಪತ್ರೆಯ ಮನಶ್ಶಾಸ್ತ್ರಜ್ಞೆ ಅರ್ಪಿತಾ ಕೊಹ್ಲಿ ಅವರು ವಿವರಿಸುವಂತೆ, “ಮೆಲಟೋನಿನ್ ನಮ್ಮ ನಿದ್ರೆ ಮತ್ತು ಎಚ್ಚರದ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಇದರ ಬಿಡುಗಡೆಯು ಬೆಳಕಿನ ಮೇಲೆ ಅವಲಂಬಿತವಾಗಿದೆ. ತೀವ್ರವಾದ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ, ಆದರೆ ಕತ್ತಲೆಯು ಅದನ್ನು ಉತ್ತೇಜಿಸುತ್ತದೆ.”
ಲೈಟ್ ಆರಿಸಿ ಸ್ನಾನ ಮಾಡುವುದರಿಂದ ಮಲಗುವ ಮುನ್ನ ಕೃತಕ ಬೆಳಕಿನ ಸಂಪರ್ಕ ತಪ್ಪುತ್ತದೆ, ಇದು ಮೆದುಳಿಗೆ ಹೆಚ್ಚಿನ ಮೆಲಟೋನಿನ್ ಬಿಡುಗಡೆ ಮಾಡಲು ಸಂಕೇತ ನೀಡುತ್ತದೆ. ಇದು ತಕ್ಷಣವೇ ಬದಲಾವಣೆ ತರದಿದ್ದರೂ, ನಿಯಮಿತವಾಗಿ ರೂಢಿಸಿಕೊಂಡರೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಒತ್ತಡ ಮತ್ತು ಆತಂಕ ನಿವಾರಣೆಗೆ ಇದು ಹೇಗೆ ಸಹಕಾರಿ?
ಸಾಮಾನ್ಯ ಸ್ನಾನಕ್ಕಿಂತ ‘ಡಾರ್ಕ್ ಶವರಿಂಗ್’ ಹೇಗೆ ಭಿನ್ನ ಎಂಬ ಪ್ರಶ್ನೆಗೆ ಕೊಹ್ಲಿ ಅವರು ಹೀಗೆ ಉತ್ತರಿಸುತ್ತಾರೆ, “ಹೌದು, ಕತ್ತಲೆಯಲ್ಲಿ ಸ್ನಾನ ಮಾಡುವುದು ಒತ್ತಡ ನಿವಾರಣೆಗೆ ಉತ್ತಮ ಸಾಧನ. ಕಣ್ಣಿಗೆ ಯಾವುದೇ ದೃಶ್ಯಗಳು ಕಾಣದಿದ್ದಾಗ, ದೇಹವು ಸ್ಪರ್ಶ, ಶಬ್ದ ಮತ್ತು ವಾಸನೆಯ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ. ನೀರಿನ ಬೆಚ್ಚಗಿನ ಅನುಭವ, ನೀರಿನ ಹರಿವಿನ ಶಬ್ದ ಮತ್ತು ಲ್ಯಾವೆಂಡರ್‌ನಂತಹ ಸೋಪಿನ ಸುವಾಸನೆ ಹೆಚ್ಚು ತೀವ್ರವಾಗಿ ಮತ್ತು ಹಿತವಾಗಿ ಅನುಭವಕ್ಕೆ ಬರುತ್ತದೆ.”
ಇದು ನರಮಂಡಲವನ್ನು ಶಾಂತಗೊಳಿಸಲು, ಅತಿಯಾದ ಆಲೋಚನೆಗಳನ್ನು ಕಡಿಮೆ ಮಾಡಲು ಮತ್ತು ಧ್ಯಾನದಂತಹ ಅನುಭವ ನೀಡಲು ಸಹಾಯ ಮಾಡುತ್ತದೆ.
ಯಾರು ಎಚ್ಚರಿಕೆ ವಹಿಸಬೇಕು?
ಡಾರ್ಕ್ ಶವರಿಂಗ್ ಆರೋಗ್ಯವಂತ ವ್ಯಕ್ತಿಗಳಿಗೆ ಸುರಕ್ಷಿತವಾಗಿದ್ದರೂ, ಎಲ್ಲರಿಗೂ ಸೂಕ್ತವಲ್ಲ ಎಂದು ಕೊಹ್ಲಿ ಎಚ್ಚರಿಸುತ್ತಾರೆ. ಸಮತೋಲನದ ಸಮಸ್ಯೆ ಇರುವವರು ತಲೆಸುತ್ತು ಅಥವಾ ದೃಷ್ಟಿ ಸಮಸ್ಯೆ ಇರುವವರು ಕತ್ತಲೆಯಲ್ಲಿ ಜಾರಿ ಬೀಳುವ ಸಾಧ್ಯತೆ ಇರುತ್ತದೆ.
“ದೃಶ್ಯಗಳ ಆಧಾರವಿಲ್ಲದೆ ಅಸ್ವಸ್ಥರಾಗುವವರು ಸಂಪೂರ್ಣ ಕತ್ತಲೆಯ ಬದಲು ಮಂದವಾದ ‘ನೈಟ್ ಲೈಟ್’ ಬಳಸಬಹುದು. ಒಟ್ಟಾರೆಯಾಗಿ, ಡಾರ್ಕ್ ಶವರಿಂಗ್ ಒಂದು ಉತ್ತಮ ಅಭ್ಯಾಸವಾಗಿದ್ದರೂ, ಅದನ್ನು ನಿಮ್ಮ ಸುರಕ್ಷತೆಗೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು,” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








