ರಾಮನಗರ : ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ನಗರ ಯೋಜನೆಗೆ ವಿರೋಧ ಮಾಡುತ್ತಿರುವ ದೇವೇಗೌಡರು, ಕುಮಾರಸ್ವಾಮಿ, ಮಾಜಿ ಶಾಸಕ ಮಂಜುನಾಥ್ ಅವರು, ಬಿಜೆಪಿ ಸರ್ಕಾರ 900 ಎಕರೆ ಜಾಗವನ್ನು ಕೆಐಎಡಿಬಿಎಗೆ ನೀಡುವಾಗ ಸಹಕಾರ ಕೊಟ್ಟಿದ್ದೇಕೆ? ಈಗ ನನ್ನನ್ನು ಪ್ರಶ್ನೆ ಮಾಡುತ್ತಿರುವುದೇಕೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಜಿಬಿಐಟಿ ವಿರುದ್ಧ ದೇವೇಗೌಡರು ಹೋರಾಟ ಮಾಡುವ ಬಗ್ಗೆ ಕೇಳಿದಾಗ, “ದೇವೇಗೌಡರು ಹೋರಾಟ ಮಾಡುವುದಾದರೆ ಬಹಳ ಸಂತೋಷ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದೇ ಅವರ ಸುಪುತ್ರ. ಈ ಬಿಡದಿ ಟೌನ್ ಶಿಪ್ ಗೆ ಡಿಎಲ್ ಎಫ್ ಜೊತೆ ಒಪ್ಪಂದ ಮಾಡಿಕೊಂಡಿದ್ದೂ ಅವರೇ, ಹಣ ಕಟ್ಟಿಸಿಕೊಂಡಿದ್ದೂ ಅವರೇ. ಅವರ ಆಡಳಿತ ಅವಧಿಯಲ್ಲಿ ಈ ಭೂಮಿಯನ್ನು ಯಾಕೆ ಡಿನೋಟಿಫಿಕೇಷನ್ ಮಾಡಲಿಲ್ಲ? ಯಡಿಯೂರಪ್ಪ ಅವರು ಕೆಐಎಡಿಬಿಗೆ ಭೂಮಿ ಕೊಟ್ಟಾಗ ಆ ಭಾಗದ ಎಲ್ಲಾ ರೈತರು ಪರಿಹಾರ ಪಡೆದಿದ್ದಾರೆ. ಈಗ ಆ ಜಾಗ ಕೆಐಎಡಿಬಿ ಸ್ವತ್ತಾಗಿದೆ. ಇವರೆಲ್ಲ ಅಂದು ಪ್ರಶ್ನೆ ಮಾಡದೇ ಸಹಕಾರ ಕೊಟ್ಟಿದ್ದೇಕೆ?” ಎಂದು ಕೇಳಿದರು.
ಡಿನೋಟಿಫಿಕೇಶನ್ ಮಾಡುವುದು ಬೇಡ, ಆ ಭೂಮಿಯನ್ನು ಯಥಾಸ್ಥಿತಿಯಲ್ಲಿ ಬಿಡಿ ಎಂಬ ಆಗ್ರಹದ ಬಗ್ಗೆ ಕೇಳಿದಾಗ, “ಅವರ ಮಾತು ಕೇಳಲು ನಾನು ತಯಾರಿಲ್ಲ. ನಮ್ಮ ಸರ್ಕಾರ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ಕಾಲದಲ್ಲೂ ಇಲ್ಲಿನ ಭೂಮಿಗೆ 90 ಲಕ್ಷದಿಂದ 1 ಕೋಟಿಗೆ ಪರಿಹಾರ ನಿಗದಿ ಮಾಡಿದಾಗ, ಆ ಜಾಗವನ್ನು ಯಥಾಸ್ಥಿತಿಯಲ್ಲೇ ಬಿಡಿಸಬಹುದಿತ್ತಲ್ಲವೇ? ಯಾಕೆ ಬಿಡಿಸಲಿಲ್ಲ? ಆಗ ಮಂಜುನಾಥ್ ಅವರೇ ಶಾಸಕರಾಗಿದ್ದರಲ್ಲವೇ? ಈ ಯೋಜನೆಗೆ ರೈತರ ವಿರೋಧವಿಲ್ಲ, ರೈತರ ಸಂಪೂರ್ಣ ಸಹಕಾರವಿದೆ” ಎಂದು ತಿಳಿಸಿದರು.
ಬ್ರೋಕರ್ ಗಳ ಮಾತುಗಳನ್ನು ಕೇಳುವುದಿಲ್ಲ
ಈ ವಿಚಾರವಾಗಿ ಗಲಾಟೆಗಳಾಗುತ್ತಿವೆ ಎಂದು ಕೇಳಿದಾಗ, “ಕಾನೂನಿದೆ, ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ. ನಾನು ರೈತರಿಗೆ ದೊಡ್ಡ ಆಫರ್ ಕೊಟ್ಟಿದ್ದೇನೆ. ಯಾರು ಈ ಪರಿಹಾರ ಬೇಡ ಎನ್ನುತ್ತಾರೋ ಅವರಿಗೆ ಕಾನೂನು ಪ್ರಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಇರುವ ಮಾರ್ಗಸೂಚಿ ಮೌಲ್ಯ ಆಧಾರದ ಮೇಲೆ ನ್ಯಾಯಾಲಯಕ್ಕೆ ನಾವು ಹಣ ಠೇವಣಿ ಮಾಡುತ್ತೇವೆ. ಅವರ ಕಾಲದಲ್ಲೇ ಸರಿ ಮಾಡಬಹುದಿತ್ತಲ್ಲವೇ? ಅವರು ಯಾರೋ ಬ್ರೋಕರ್ ಹೇಳುತ್ತಾರೆ ಎಂದು ನಾನು ಕೇಳುವುದಿಲ್ಲ, ನೈಜ ರೈತರು ಯಾರು, ನಕಲಿ ರೈತರು ಯಾರು ಎಂಬುದೂ ಗೊತ್ತಿದೆ. ಏಜೆಂಟ್ ಗಳು ಯಾರು ಎಂಬುದೂ ಗೊತ್ತಿದೆ. ಕೆಐಡಿಬಿಗೆ 900 ಎಕರೆ ಭೂಮಿ ಕೊಟ್ಟಾಗ ಯಾರು ಹಣ ಪಡೆದಿದ್ದಾರೆ ಎನ್ನುವ ಪಟ್ಟಿ ಬಿಡುಗಡೆ ಮಾಡಲೇ? ಟೊಯೋಟಾ ಕಂಪೆನಿಯವರು ನನ್ನನ್ನು ಭೇಟಿ ಮಾಡಿ ವಾಸದ ಉದ್ದೇಶಕ್ಕೆ 300 ಎಕರೆ ಭೂಮಿ ಬೇಕು ಎಂದು ಕೇಳಿದರು. ಅದಕ್ಕೆ ನಾನು ಹೇಳಿದೆ, 300 ಎಕರೆ ತೆಗೆದುಕೊಳ್ಳುವುದು ಮುಖ್ಯವಲ್ಲ. ಜಪಾನ್ ಟೌನ್ ಶಿಪ್ ಮಾದರಿಯಲ್ಲೇ ನಿಮ್ಮ ಟೌನ್ ಶಿಪ್ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದರು.
ಟೊಯೋಟಾದವರು ಎಲ್ಲಿ ಭೂಮಿ ಕೇಳಿದ್ದಾರೆ? ಜಿಬಿಐಟಿಯಲ್ಲೇ ಕೊಡುತ್ತೀರಾ ಎಂದು ಕೇಳಿದಾಗ, “ಅವರು ಜಿಬಿಐಟಿಯಲ್ಲೇ ಕೇಳುತ್ತಿದ್ದಾರೆ” ಎಂದು ತಿಳಿಸಿದರು.
ಅಧಿಕಾರ ಇದ್ದಾಗ ಅಶೋಕ್, ದೇವೇಗೌಡರು ಇದನ್ನು ಸರಿಪಡಿಸಲಿಲ್ಲವೇಕೆ?
ರಾಜಕೀಯವಾಗಿ ವಿರೋಧ ಮಾಡಲು ಆರ್.ಅಶೋಕ್, ದೇವೇಗೌಡರು ಆಗಮಿಸುತ್ತಿದ್ದಾರೆ ಎಂದು ಕೇಳಿದಾಗ, “ಅಶೋಕ್ ಅವರಾದರೂ ಬರಲಿ, ದೇವೇಗೌಡರಾದರೂ ಬರಲಿ. ಅವರ ರಾಜಕೀಯ ಹೋರಾಟಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಅವರಿಗೂ ವಾಸ್ತವಾಂಶ ಗೊತ್ತಿದೆ. ಅಶೋಕ್ ಅವರಿಗೆ ಪೆನ್ ಹಿಡಿಯುವ ಅಧಿಕಾರ ಇದ್ದಾಗ ಈ ಭೂಮಿಯನ್ನು ಏಕೆ ಬಿಡಿಸಲಿಲ್ಲ? ಯಡಿಯೂರಪ್ಪ ಅವರು ಏಕೆ ಬಿಡಿಸಲಿಲ್ಲ? ದೇವೇಗೌಡರು ತಮ್ಮ ಮಗನ ಮೂಲಕ ಏಕೆ ಬಿಡಿಸಲಿಲ್ಲ? ಆಗ ಇದು ಅವರದೇ ಕ್ಷೇತ್ರವಾಗಿತ್ತು. ಆಗ ನಾನು ಮಂತ್ರಿಯಾಗಿರಲಿಲ್ಲ, ಅವರ ಮಗನಿಗೆ ಇದು ಸರಿ ಇಲ್ಲ ಬೇಡ ಎಂದು ಹೇಳಬಹುದಿತ್ತಲ್ಲವೇ? ಅವತ್ತು ಸರಿ ಮಾಡದೇ ಇವತ್ತು ರಾಜಕಾರಣ ಮಾಡಲು ನಮ್ಮ ಕಡೆ ಬೊಟ್ಟು ಮಾಡುತ್ತಿದ್ದಾರೆ. ಶಾಸಕ ಬಾಲಕೃಷ್ಣ ಅವರ ರಾಜಕೀಯ ವಿರೋಧಿಗಳು ಮಾತ್ರ ಇಂದು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಮದ್ದೂರು ಗಣೇಶ ಗಲಾಟೆ ಕೇಸ್: ವಿಜಯೇಂದ್ರಗೆ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಕೆ, ಏನಿದೆ ಗೊತ್ತಾ?
ಬೆಂಗಳೂರಲ್ಲಿ ಸರಿಯಾಗಿ ವೈಟ್ ಟಾಪಿಂಗ್ ಮಾಡದ ಗುತ್ತಿಗೆದಾರ, ಎಂಜಿನಿಯರ್ ವಿರುದ್ಧ ಕೇಸ್ ಹಾಕಿ: ಸಿಎಂ ಸೂಚನೆ