ಬೆಂಗಳೂರು ; ರಾಜ್ಯದ ಉಪ ಚುನಾವಣೆ ಮತ್ತು ಅನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಕ್ಫ್ ವಿವಾದ ಪ್ರಸ್ತಾಪಿಸುತ್ತಿದ್ದ ಬಿಜೆಪಿ ನಾಯಕರು ಚುನಾವಣೆ ನಂತರ ಯಾಕೆ ಮೌನವಾಗಿದ್ದಾರೆ ಎಂದು ವಸತಿ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಹುಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಅಪ್ಪೋಡು ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಕೋಕಿಲಾ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಎಲ್ಲಾ ಕಡೆ ವಕ್ಫ್ ಎಂದು ಅನಗತ್ಯವಾಗಿ ಹುಯಿಲೆಬ್ಬಿಸಿದರು. ಚುನಾವಣೆ ಮುಗಿದ ನಂತರ ತೆಪ್ಪಗಾಗಿದ್ದಾರೆ ಎಂದರು.
ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಹಿಂದು ಮುಸ್ಲಿಂ ಎಂದು ಸಂಘರ್ಷ ಮೂಡಿಸುವುದೇ ಅವರ ಕಾಯಕವಾಗಿದೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ. ಆದರೆ ಬಡವರ ಕೆಲಸಗಳಿಗೂ ಬಿಜೆಪಿ ಅಡ್ಡಿ ಮಾಡುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಒಂದೇ ಒಂದು ಮನೆ ಕಟ್ಟಿ ಕೊಟ್ಟಿಲ. ಕೇಂದ್ರ ಸರ್ಕಾರ ಬಡವರ ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡಿ ಸರ್ಕಾರದ ನೆರವಿ ಮೊತ್ತದಲ್ಲಿ ಜಿ ಎಸ್ ಟಿ ರೂಪದಲ್ಲಿ ಶೇ 18 ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಬಡವರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಹುದಿನಗಳ ಕನಸಾಗಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿ, ಚಾಮರಾಜಪೇಟೆಯ ರಸ್ತೆಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಒಟ್ಟು 57.64 ಕೋಟಿ ರೂಪಾಯಿ ಮೊತ್ತದ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಕೈಗೊಂಡಿರುವುದು ತಮಗೆ ಸಂತಸ ತಂದಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಡ್ರಗ್ಸ್ ವಿರುದ್ಧ ಕ್ರಮಕೈಗೊಳ್ಳಲು ನಿರ್ಲಕ್ಷಿಸಿದರೆ ಅಧಿಕಾರಿಗಳ ತಲೆದಂಡ: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ
BIG NEWS : ಯಾರು ಕಣ್ಣೀರು ಹಾಕಬಾರದು, ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ : ನಿಖಿಲ್ ಕುಮಾರಸ್ವಾಮಿ ಹೇಳಿಕೆ