ಟೆಹ್ರಾನ್:ಇರಾನ್ ಮತ್ತು ಅಮೆರಿಕ ನಡುವಿನ ವಾಕ್ಸಮರವು ಈಗ ಯುದ್ಧದ ಅಂಚಿಗೆ ಬಂದು ತಲುಪಿದೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಗೆ ಇರಾನ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ನಿಮ್ಮ ಈ ನಿರ್ಧಾರದಿಂದ ಇಡೀ ಪಶ್ಚಿಮ ಏಷ್ಯಾ ಪ್ರಾಂತ್ಯವೇ ಬೆಂಕಿಗೆ ಆಹುತಿಯಾಗಲಿದೆ” ಎಂದು ಎಚ್ಚರಿಸಿದೆ.
ಸ್ಟ್ರೈಟ್ ಆಫ್ ಹಾರ್ಮುಜ್ (Strait of Hormuz) ಜಲಸಂಧಿಯನ್ನು ತೆರೆಯದಿದ್ದರೆ ಅಥವಾ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಮಂಗಳವಾರದೊಳಗೆ ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳು ಮತ್ತು ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿದ್ದರು.
ಟ್ರಂಪ್ ಎಚ್ಚರಿಕೆಗೆ ಪ್ರತ್ಯುತ್ತರ ನೀಡಿದ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್, “ನಿಮ್ಮ ಅಜಾಗರೂಕ ಕ್ರಮಗಳು ಅಮೆರಿಕದ ಪ್ರತಿಯೊಂದು ಕುಟುಂಬವನ್ನೂ ‘ನರಕ’ಕ್ಕೆ ತಳ್ಳಲಿವೆ. ಇಡೀ ಪ್ರದೇಶವು ಬೂದಿಯಾಗಲಿದೆ” ಎಂದು ಗುಡುಗಿದ್ದಾರೆ.
ಟ್ರಂಪ್ ಅವರು ತಮ್ಮ ಪೋಸ್ಟ್‌ನಲ್ಲಿ ಇರಾನ್ “ನರಕದಲ್ಲಿ ಬದುಕಬೇಕಾಗುತ್ತದೆ” ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಮಿಲಿಟರಿ ಅಧಿಕಾರಿಗಳು, ಅಮೆರಿಕವು ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಅವರ ಆದೇಶಗಳನ್ನು ಪಾಲಿಸುತ್ತಿದೆ ಮತ್ತು ಇದು ಅಮೆರಿಕಕ್ಕೆ ದೊಡ್ಡ ಬೆಲೆಯಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.








