ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇದೆಲ್ಲಾ? ರಾಜ್ಯದ ಪರಿಸ್ಥಿತಿ ನೋಡಿದರೆ ಈ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಕರ್ನಾಟಕದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇನೆ ಎಂಬುದಾಗಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು, ಕೆಟ್ಟ ಆಡಳಿತಕ್ಕೆ ನಿದರ್ಶನ. ಅವರ ಆಡಳಿತದ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕ ಇಂದು ಅದಕ್ಷ, ಕೆಟ್ಟ ಆಡಳಿತಕ್ಕೆ ನಿದರ್ಶನ ಆಗಿದೆ. ದೇವರಾಜು ಅರಸು ಎಲ್ಲಿ? ಇವರಲ್ಲಿ? ಅರಸು ಅವರ ದಾಖಲೆ ಮುರಿಯುವುದು ಇರಲಿ, ರಾಜ್ಯದಲ್ಲಿ ಇವರೇ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್ಸಿಗೆ ಮತದಾರರು ಬುದ್ಧಿ ಕಲಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂಬುದಾಗಿ ಹೇಳಿಕೊಳ್ಳುವ ಇವರಿಗೆ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಎರಡೂವರೆ ವರ್ಷಗಳ ಆಡಳಿತ ಇತಿಹಾಸ ಸೇರುವಂತಹ ಕೆಟ್ಟ ಆಡಳಿತವಾಗಿದೆ, ಭ್ರಷ್ಟಾಚಾರ, ಕೊಲೆ, ಸುಲಿಗೆ, ಡ್ರಗ್ಸ್ ಮಾಫಿಯಾ, ಮಾರ್ಯಾದಾ ಹತ್ಯೆ ಪ್ರಕರಣಗಳು ನಿರಂತರವಾಗಿವೆ. ಇದನ್ನು ಹತ್ತಿಕ್ಕಲು ಸಾಧ್ಯವಾಗದೆ, ದಾಖಲೆಗೋಸ್ಕರ ಸಿದ್ದರಾಮಯ್ಯ ಆಡಳಿತ ನಡೆಸುತ್ತಿರುವಂತಿದೆ. ಅಧಿಕಾರಿಗಳು ಗುಲಾಮರಾಗಿದ್ದಾರೆ. ಅಧಿಕಾರಿಗಳು ಇವರ ಆಡಳಿತದಲ್ಲಿ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ, ಸ್ವಾತಂತ್ರ್ಯ ಎಂಬುದೇ ಇಲ್ಲ, ಬ್ಯಾಟರಿ ಹಾಕಿ ಹುಡುಕಿದರೂ ಒಬ್ಬ ಒಳ್ಳೆ ಅಧಿಕಾರಿ ಸಿಗುವುದಿಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನಕಲಿಶ್ಯಾಮರಂತೆ ವರ್ತಿಸುತ್ತಿದ್ದಾರೆ, ಗೃಹ ಸಚಿವರಿಗೆ ಅಧಿಕಾರದ ಗತ್ತು ಎಂಬುದೇ ಗೊತ್ತಿಲ್ಲ, ಯಾವುದೇ ಪ್ರಕರಣ ನಡೆದರೂ ಎಸ್‌ಐಟಿ ರಚಿಸಿ ಕೈತೊಳೆದುಕೊಳ್ಳುವುದು, ನಾಜೂಕಯ್ಯನ ರೀತಿ ಮಾತನಾಡುವುದೊಂದೇ ತಿಳಿದಿರುವುದು ಎಂದು ಅವರು ಕಿಡಿಕಾರಿದರು.
ಓಂ ಶಕ್ತಿ ಭಕ್ತರ ಮೇಲೆ ಕಲ್ಲು; ಹೆಚ್ಡಿಕೆ ಖಂಡನೆ
ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲೆ ಹಾಕಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಭಕ್ತರ ಮೇಲೆ ಕಲ್ಲು ಎಸೆದಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಈ ಘಟನೆಯನ್ನು ಉಗ್ರವಾಗಿ ಖಂಡಿಸಿದ ಕೇಂದ್ರ ಸಚಿವರು; ಓಂ ಶಕ್ತಿಗೆ ಯಾತ್ರೆಗೆ ಹೊರಟಿರುವ ಹೆಣ್ಣು ಮಕ್ಕಳ ಮೇಲೆ ಕಲ್ಲು ಎಸೆಯುತ್ತಾರೆ ಎಂದರೆ ಈ ರಾಜ್ಯ ಎಲ್ಲಿಗೆ ಬಂದಿವೆ ಎಂಬುದು ಅರ್ಥವಾಗುತ್ತದೆ. ಇದಕ್ಕೆಲ್ಲಾ ಈ ಸರ್ಕಾರದ ನಡವಳಿಕೆಯೇ ಕಾರಣ ಎಂದು ಅವರು ಟೀಕಿಸಿದರು.
2025ರಲ್ಲಿ ಆಪಲ್ ಭಾರತದಿಂದ $50 ಬಿಲಿಯನ್ ಮೌಲ್ಯದ ಐಫೋನ್‌ಗಳನ್ನು ರಪ್ತು | Apple iPhones








