ನವದೆಹಲಿ: ಬಳಕೆದಾರರ ಗೌಪ್ಯತೆಗೆ (Privacy) ಹೆಚ್ಚಿನ ಒತ್ತು ನೀಡುತ್ತಿರುವ ಮೆಟಾ ಒಡೆತನದ ವಾಟ್ಸಾಪ್, ಶೀಘ್ರದಲ್ಲೇ ಅತ್ಯಂತ ಉಪಯುಕ್ತವಾದ ’15-ಮಿನಿಟ್ ಆಟೋ ಡಿಲೀಟ್’ ಫೀಚರ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಆಯ್ಕೆಯು ಚಾಟಿಂಗ್ ಲೋಕದಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆಯಿದೆ.
ಈ ಹೊಸ ಫೀಚರ್ ಅನ್ನು ‘ಆಫ್ಟರ್ ರೀಡಿಂಗ್’ ಎಂದು ಕರೆಯಲಾಗುತ್ತಿದ್ದು, ಸಂದೇಶವನ್ನು ಸ್ವೀಕರಿಸುವವರು ಅದನ್ನು ಓದಿದ ಸರಿಯಾಗಿ 15 ನಿಮಿಷಗಳ ನಂತರ ಆ ಸಂದೇಶವು ಚಾಟ್ ಬಾಕ್ಸ್ನಿಂದ ತಾನಾಗಿಯೇ ಡಿಲೀಟ್ ಆಗುತ್ತದೆ.ಸದ್ಯಕ್ಕೆ ವಾಟ್ಸಾಪ್ನಲ್ಲಿ ಸಂದೇಶಗಳು ಅದೃಶ್ಯವಾಗಲು (Disappearing Messages) ಕನಿಷ್ಠ 24 ಗಂಟೆ, 7 ದಿನ ಅಥವಾ 90 ದಿನಗಳ ಕಾಲಾವಕಾಶವಿದೆ. ಆದರೆ ಹೊಸ ಅಪ್ಡೇಟ್ನಲ್ಲಿ ಕೇವಲ 15 ನಿಮಿಷದ ಆಯ್ಕೆಯನ್ನು ನೀಡಲಾಗುತ್ತಿದೆ.
ಬ್ಯಾಂಕ್ ಓಟಿಪಿಗಳು, ಪಾಸ್ವರ್ಡ್ಗಳು ಅಥವಾ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವಾಗ ಈ ಫೀಚರ್ ಬಹಳ ಸಹಕಾರಿಯಾಗಲಿದೆ. ಸಂದೇಶಗಳನ್ನು ಮ್ಯಾನುಯಲ್ ಆಗಿ ಡಿಲೀಟ್ ಮಾಡುವ ಕೆಲಸ ಇನ್ನು ಮುಂದೆ ಇರುವುದಿಲ್ಲ.
ಕಳುಹಿಸುವವರು ಈ ಟೈಮರ್ ಅನ್ನು ಸೆಟ್ ಮಾಡಿದರೆ, ಸಂದೇಶವು ಕಳುಹಿಸಿದ 15 ನಿಮಿಷಕ್ಕೆ ಕಳುಹಿಸಿದವರ ಫೋನ್ನಿಂದ ಮಾಯವಾಗುತ್ತದೆ. ಆದರೆ ಪಡೆಯುವವರು ಅದನ್ನು ಓದಿದ 15 ನಿಮಿಷದ ನಂತರ ಅವರ ಫೋನ್ನಿಂದಲೂ ಡಿಲೀಟ್ ಆಗುತ್ತದೆ. ಒಂದು ವೇಳೆ ಅವರು ಸಂದೇಶ ಓದದಿದ್ದರೆ, 24 ಗಂಟೆಯ ನಂತರ ಅದು ತಾನಾಗಿಯೇ ಮಾಯವಾಗುತ್ತದೆ.








