ಬೆಂಗಳೂರು: “ದೇಶದಲ್ಲಿ ಇಂಧನ, ಅಗತ್ಯ ವಸ್ತುಗಳು, ರಸಗೊಬ್ಬರ, ಚಿನ್ನ, ಸಿಮೆಂಟ್, ಕಬ್ಬಿಣ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಜನರ ಮೇಲೆ ಈ ಬೆಲೆ ಏರಿಕೆ ಹೊರೆ ತಗ್ಗಿಸಲು ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದು, ರೈತರ ಬದುಕು ಕಾಪಾಡಲು ಹಾಲಿನ ಬೆಲೆ ಏರಿಸಿದ್ದೇವೆ. ಹೀಗಾಗಿ ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಮಾತನಾಡಿದರು.
“ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಹೀಗಾಗಿ ಬಿಜೆಪಿ ನಾಯಕರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಇರಬೋಕೇ ಹೊರತು, ಬಡವರ ಪರವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರವಲ್ಲ. ಬಿಜೆಪಿಯಲ್ಲಿ ಹಾಗೂ ಜನತಾ ದಳದಲ್ಲಿ ಆಂತರಿಕ ಜಗಳ, ನಾಯಕತ್ವದ ಕೊರತೆ ಮುಚ್ಚಿಡಲು ಇಂದು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ. ನಮ್ಮದು ರೈತಪರ ಸರ್ಕಾರ, ಎಲ್ಲಾ ವರ್ಗದ ಜನರ ಪರವಾದ ಸರ್ಕಾರ. ನಾವು ರೈತರಿಗೆ ನೆರವಾಗಲು ಹಾಲಿನ ಬೆಲೆ ರೂ.4 ಹೆಚ್ಚಳ ಮಾಡಿದ್ದೇವೆ. ದನಕರುಗಳ ಮೇವುಗಳಾದ ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ. ಹೀಗಾಗಿ ನಾವು ರೈತರಿಗೆ ನೆರವಾಗಲು ರೂ.4 ಹೆಚ್ಚಿಗೆ ಸಿಗುವಂತೆ ಮಾಡಿದರೆ ಪ್ರತಿಭಟನೆ ಮಾಡುತ್ತೀರಿ. ಆಮೂಲಕ ನೀವು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದೀರಿ” ಎಂದು ಹರಿಹಾಯ್ದರು.
ಬೆಲೆ ಹೆಚ್ಚಿಸಿದರೂ ಹಾಲಿನ ದರ ನಮ್ಮಲ್ಲೇ ಕಡಿಮೆ:
“ಹಾಲಿನ ಬೆಲೆ ಕೇರಳದಲ್ಲಿ 52, ಗುಜರಾತ್ 53, ದೆಹಲಿ 55, ಮಹಾರಾಷ್ಟ್ರದಲ್ಲಿ 52, ತೆಲಂಗಾಣದಲ್ಲಿ 58, ಅಸ್ಸಾಂ 60, ಹರಿಯಾಣದಲ್ಲಿ 56, ರಾಜಸ್ಥಾನದಲ್ಲಿ 50, ಮಧ್ಯಪ್ರದೇಶದಲ್ಲಿ 52, ಪಂಜಾಬ್ ನಲ್ಲಿ 56, ಉತ್ತರ ಪ್ರದೇಶದಲ್ಲಿ 56 ರೂಪಾಯಿಗಳಿವೆ. ನಮ್ಮ ರಾಜ್ಯದಲ್ಲಿ ಈ ಎಲ್ಲಾ ರಾಜ್ಯಗಳಿಗಿಂತ 10-12 ರೂಪಾಯಿ ಕಡಿಮೆ ಇದೆ. ನಾವು ರೈತರ ಬದುಕು ರಕ್ಷಣೆಗೆ 4 ರೂಪಾಯಿ ಹೆಚ್ಚಿಸಿದ್ದೇವೆ. ನೀವು ಮಳೆ, ಗಾಳಿಗೆ ಹೆದರಿ ಜನಾಕ್ರೋಶ ಯಾತ್ರೆ ಕೈಬಿಟ್ಟಿದ್ದೀರಿ.
ಕೇಂದ್ರ ಬಿಜೆಪಿ ಸರ್ಕಾರದಿಂದ ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ, ಸೋಪು, ಉಪ್ಪು, ಟಿವಿ, ಟೂತ್ ಬ್ರೇಷ್, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಹೆಣ್ಣು ಮಕ್ಕಳು ಚಿನ್ನದ ಮಾಂಗಲ್ಯ ಸರ ಖರೀದಿಸಲು ಸಾಧ್ಯವಾಗುತ್ತಿಲ್ಲ. 10 ಗ್ರಾಂ ಚಿನ್ನ 40 ಸಾವಿರದಿಂದ 96 ಸಾವಿರಕ್ಕೆ ಏರಿಕೆಯಾಗಿದೆ. 10 ಸಾವಿರ ಇದ್ದ ಮೊಬೈಲ್ 30 ಸಾವಿರವಾಗಿದೆ. ಸಿಮೆಂಟ್ 268 ರಿಂದ 410 ಆಗಿದೆ. ಇದಕ್ಕೆಲ್ಲ ಯಾರು ಕಾರಣ? ಬಿಜೆಪಿ. ಹೀಗಾಗಿ ಜನಾಕ್ರೋಶ ಬಿಜೆಪಿ ಸರ್ಕಾರದ ವಿರುದ್ಧ ಆಗಬೇಕು” ಎಂದು ತಿರುಗೇಟು ನೀಡಿದರು.
ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ಮಾಡಿ
“ರಾಜ್ಯ ಹಾಗೂ ದೇಶದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದೆವು. 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಭವಿಷ್ಯ ನುಡಿದಂತೆ 136 ಸೀಟು ಗೆದ್ದೆವು. ನಂತರ ಬಂದ ಉಪಚುನಾವಣೆಗಳಲ್ಲಿ ಚನ್ನಪಟ್ಟಣ, ಶಿಗ್ಗಾಂವ್ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಈ ಮೂರರಲ್ಲಿ ಜನ ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದರು. ಇದಕ್ಕೆ ಕಾರಣವೇನು ಎಂದು ಬಿಜೆಪಿ ನಾಯಕರು ಹೇಳಬೇಕು” ಎಂದು ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕುಸಿದಿದ್ದರೂ ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಆದರೂ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ಇದು ರಾಜ್ಯಮಟ್ಟದ ಹೋರಾಟ. ಇದೇ ಮಾದರಿಯಲ್ಲಿ ಜಿಲ್ಲಾ ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡುತ್ತೇನೆ. ಬೆಲೆ ಏರಿಕೆ ವಿಚಾರವಾಗಿ ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಸೂಚಿಸಿದರು.
ಕಾಮಾಲೆ ಕಣ್ಣಿಂದಲ್ಲ, ಆತ್ಮಸಾಕ್ಷಿಯಿಂದ ನೋಡಿ
“ರಸ್ತೆ ಸರಿ ಇಲ್ಲವಾದರೆ ಕುದುರೆ ಮೇಲೆ ಹೋಗಿ, ಕರೆಂಟ್ ಇಲ್ಲವಾದರೆ ತಂತಿ ಹಿಡಿದು ನೋಡಿ ಎಂದು ಮಾಜಿ ಸಿಎಂ ಜೆ.ಹೆಚ್ ಪಟೇಲರು ಹೇಳಿದ್ದರು. ಆದರೆ ನಾನು ಆ ರೀತಿ ಹೇಳುವುದಿಲ್ಲ. ನಮ್ಮ ಸರ್ಕಾರ ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ಉತ್ತಮ ಆಡಳಿತ ನೀಡುತ್ತಾ ಬಂದಿದ್ದೇವೆ. ನಿನ್ನೆ ನಾನು ಹಾಗೂ ಮುಖ್ಯಮಂತ್ರಿಗಳು ಕಲಬುರ್ಗಿ ಹಾಗೂ ಬೀದರ್ ಗೆ ತೆರಳಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದೆವು. ಬೀದರ್ ಒಂದೇ ಜಿಲ್ಲೆಯಲ್ಲಿ ರೂ. 2025 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಬಂದಿದ್ದೇವೆ. ಕಲಬುರ್ಗಿಯಲ್ಲಿ ಉದ್ಯೋಗ ಮೇಳ ನಡೆಸಲಾಗಿತ್ತು, ಕಲ್ಯಾಣ ಪಥ ಯೋಜನೆ ಮೂಲಕ ರಸ್ತೆ ಅಭಿವೃದ್ಧಿಗೆ ರೂ.1500 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರೂ.5 ಸಾವಿರ ಕೋಟಿ ಮೀಸಲಿಡಲಾಗಿದೆ. ನನ್ನ ಇಲಾಖೆಯಲ್ಲಿ ರೂ.22 ಸಾವಿರ ಕೋಟಿ ಮೀಸಲಿಡಲಾಗಿದೆ” ಎಂದು ತಿಳಿಸಿದರು.
“ಬೆಂಗಳೂರು ನಗರದಲ್ಲಿ ಮೆಟ್ರೋ ವಿಸ್ತರಣೆ, ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್, ವಿದ್ಯುತ್, ಕಸ ನಿರ್ವಹಣೆಗಾಗಿ 1 ಲಕ್ಷ ಕೋಟಿ ಮೊತ್ತದ ಕಾರ್ಯಕ್ರಮ ರೂಪಿಸಲಾಗಿದೆ. ಇದೆಲ್ಲವೂ ಅಭಿವೃದ್ಧಿಯಲ್ಲವೇ? ವಿರೋಧ ಪಕ್ಷಗಳು ನಮ್ಮ ಸರ್ಕಾರದ ಕೆಲಸಗಳನ್ನು ಕಾಮಾಲೆ ಕಣ್ಣಿನಲ್ಲಿ ನೋಡುತ್ತಿವೆ. ನೀವು ನಿಮ್ಮ ಆತ್ಮಸಾಕ್ಷಿ ದೃಷ್ಟಿಯಲ್ಲಿ ನೋಡಿ, ಆಗ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಕಾಣುತ್ತವೆ” ಎಂದು ಸವಾಲೆಸೆದರು.
“ನಮ್ಮ ಸರ್ಕಾರ 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿ ದಾಖಲೆ ಬರೆದಿದೆ. ನಮ್ಮ ಸರ್ಕಾರ, ನಮ್ಮ ಹೋರಾಟ ಜನರ ಪರ ಹಾಗೂ ಹಿತಕ್ಕಾಗಿ ಇದೆ. ನಾನು ನೀರಾವರಿ ಸಚಿವನಾದ ಬಳಿಕ ಬೆಂಗಳೂರು ನಗರದ ಕುಡಿಯುವ ನೀರಿನ ಪ್ರಮಾಣವನ್ನು 6 ಟಿಎಂಸಿಯಷ್ಟು ಹೆಚ್ಚಳ ಮಾಡಿದ್ದೇನೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಾಗಿದೆ. ಬರಗಾಲ ಬಂದರೂ ನೀರಿನ ಸಮಸ್ಯೆ ನಿವಾರಣೆಗೆ ಬದ್ಧವಾಗಿದ್ದೇವೆ” ಎಂದು ಹೇಳಿದರು.
“ರಾಜ್ಯದಲ್ಲಿ ಸಾವಿರಾರು ಬಸ್ ಗಳನ್ನು ಹೊಸದಾಗಿ ಬಿಡಲಾಗಿದೆ. ನಮ್ಮ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. 2 ಸಾವಿರ ಹಣ, 10 ಕೆ.ಜಿ ಅಕ್ಕಿ, 200 ಯೂನಿಟ್ ವಿದ್ಯುತ್, ನಿರುದ್ಯೋಗ ಯುವಕರಿಗಾಗಿ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಲು ಈ ಕಾರ್ಯಕ್ರಮ ರೂಪಿಸಿದ್ದೇವೆ. ಹೀಗಾಗಿ ನಿಮ್ಮ ಆಕ್ರೋಶ ಬಿಜೆಪಿಯವರ ವಿರುದ್ಧ ಇರಬೇಕು” ಎಂದರು.
ಕುಮಾರಸ್ವಾಮಿ ಅಣ್ಣ ತಮ್ಮಂದಿರ ಆಸ್ತಿಯನ್ನು ನಾನಿನ್ನು ಬಿಚ್ಚಿಟ್ಟಿಲ್ಲ
“ಕುಮಾರಸ್ವಾಮಿ ನನ್ನ ವಿರುದ್ಧ ಟನ್ ಗಟ್ಟಲೆ ಸಾಕ್ಷಾಧಾರಗಳನ್ನು ಇಟ್ಟುಕೊಂಡಿದ್ದಾರೆ. ಇದನ್ನು ಏಕೆ ಇಟ್ಟುಕೊಂಡಿದ್ದಾರೆ, ಲಾರಿಗಳಲ್ಲಿ ರಾಜ್ಯಪಾಲರ ಬಳಿ ಕಳುಹಿಸುತ್ತಿಲ್ಲ ಏಕೆ? ಮಿಸ್ಟರ್ ಕುಮಾರಸ್ವಾಮಿ, ಈ ಡಿ.ಕೆ. ಶಿವಕುಮಾರ್ ನಿನ್ನ ಹಾಗೂ ಬಿಜೆಪಿಯ ಗೊಡ್ಡು ಬೆದರಿಕೆಗೆ ಹೆದರುವ ಮಗ ಅಲ್ಲ. ನಮ್ಮ ಕಷ್ಟ, ನಮ್ಮ ಶ್ರಮ, ನಮ್ಮ ಬದುಕು. ನಾವು ಆಸ್ತಿ ಮಾಡಿಕೊಳ್ಳುತ್ತೇವೆ. ಅದರ ಸತ್ಯಾಸತ್ಯತೆ ಸರ್ಕಾರ ಪರಿಶೀಲನೆ ಮಾಡಲಿ. ನಾನು ನಿನ್ನ ಚರಿತ್ರೆಯನ್ನು ಇನ್ನು ಬಿಚ್ಚಿಲ್ಲ. ನಿಮ್ಮ ಅಣ್ಣ ತಮ್ಮಂದಿರ ಆಸ್ತಿ ಎಲ್ಲಿಂದ ಬಂತು ಎಂಬುದನ್ನು ನಾನಿನ್ನು ಬಿಚ್ಚಿಟ್ಟಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿಯ ಚಂಗಲು ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ. ಆತನ ವಿರುದ್ಧ ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವ ಪ್ರಕರಣಗಳಿವೆ. ಎಲ್ಲವೂ ಸಾಬೀತಾಗುತ್ತಿವೆ. ಆತ ಆಡಿರುವ ಮಾತುಗಳು ಸಾಬೀತಾಗಿವೆ. ಈಗ ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಭ್ರಷ್ಟ ಬಿಜೆಪಿ, ದಳದ ವಿರುದ್ಧ ಹೋರಾಟ ಮಾಡಿ 2028ರಲ್ಲಿ ಮತ್ತೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಬಡವರ, ದಲಿತರ, ರೈತರ ಕಣ್ಣೀರು ಒರೆಸಿದ್ದೀರಾ?: ಸಿದ್ಧರಾಮಯ್ಯಗೆ ವಿಜಯೇಂದ್ರ ಪ್ರಶ್ನೆ
EaseMyTrip ಕಚೇರಿ ಸೇರಿದಂತೆ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ದಾಳಿ