ರಾಮನಗರ: ನಾನು ಇಂಧನ ಸಚಿವನಾಗಿದ್ದಾಗ 10 ಕಡೆಗಳಲ್ಲಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿದ್ದೇನೆ. ಪ್ರತಿ ಹಳ್ಳಿಯಲ್ಲಿ ಪ್ರತಿ ಇಬ್ಬರು ರೈತರಿಗೆ ಹೆಚ್ ವಿಡಿ ಯೋಜನೆಯಡಿ ಟ್ರಾನ್ಸ್ ಫಾರ್ಮರ್ಸ್ ಅಳವಡಿಸಿಕೊಟ್ಟಿದ್ದೇನೆ. ಈ ಕೆಲಸ ಕುಮಾರಸ್ವಾಮಿಯಿಂದ ಯಾಕೆ ಸಾಧ್ಯವಾಗಿಲ್ಲ? ಕುಮಾರಸ್ವಾಮಿ ಕ್ಷೇತ್ರದಲ್ಲಿ ಯಾರಿಗಾದರೂ ಒಬ್ಬರಿಗೆ ನಿವೇಶನ ಹಂಚಿದ್ದಾರಾ? ನಾವು ನಿವೇಶನ ನೀಡಲು ಬಂದಾಗ, ಜಿಲ್ಲಾಧಿಕಾರಿಗೆ ಕರೆ ಮಾಡಿ ನನ್ನ ಅವಧಿಯಲ್ಲಿ ಈ ಕೆಲಸ ಮಾಡಲು ಆಗಿಲ್ಲ, ಈಗ ಯಾಕೆ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ. ಕುಮಾರಣ್ಣ ನಿನಗೆ ಬಡವರ ಬಗ್ಗೆ ವಿಶ್ವಾಸ ಇರಲಿಲ್ಲ, ಅದಕ್ಕೆ ನೀನು ಮಾಡಲಿಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಗುಡುಗಿದರು.
ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿ ಮಾತನಾಡಿದಂತ ಅವರು, ಮಹಿಳೆಯರದ್ದು ಹೆಂಗರುಳು, ಅವರಿಗೆ ಸಹಾಯ ಮಾಡಿದರೆ ಅವರು ಋಣ ತೀರಿಸುತ್ತಾರೆ. ಹೀಗಾಗಿ ಅವರಿಗೆ ಹೆಚ್ಚು ಕಾರ್ಯಕ್ರಮ ನೀಡಿದ್ದೇವೆ. ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆ ನೀಡಿದ್ದು, ನೀವು ಯಾವುದೇ ಪುಣ್ಯಕ್ಷೇತ್ರಕ್ಕೆ ಉಚಿತವಾಗಿ ಹೋಗಬಹುದು. ಈ ಯೋಜನೆಯಿಂದ ನಮ್ಮ ದೇವಾಲಯಗಳ ಹುಂಡಿಯಲ್ಲಿ ಹಣ ಹೆಚ್ಚಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂದರು.
ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ?
ರಾಮನಗರದಲ್ಲಿ ಕುಮಾರಸ್ವಾಮಿ ಅವರೂ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? ಕೆಲಸ ಮಾಡಿ, ಜನರ ಸೇವೆ ಮಾಡಿದ್ದರೆ ಸೋಲುತ್ತಿರಲಿಲ್ಲ. 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿಕಾರ್ಮಿಕರೇ? ಮತದಾನದ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ.
ಸರ್ಕಾರ ನಿಮ್ಮ ಜತೆಗಿದೆ:
ಕೊಟ್ಟ ಕುದುರೆ ಏರಲು ಅರಿಯದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಅಧಿಕಾರ ಇದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಬಡವರಿಗೆ ಸಹಾಯ ಮಾಡದಿದ್ದರೆ, ಜನರಿಗೆ ನೆರವಾಗದಿದ್ದರೆ, ಶಾಸಕನಾಗಿ ಒಂದೇ ಒಂದು ಬಗರ್ ಹುಕ್ಕುಂ ಸಭೆ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆಯೂ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲಿಲ್ಲ. ಈ ದೇಶಕ್ಕೆ ಗೌರವ ಕೊಡದಿದ್ದರೆ, ಜನರಿಗೆ ಗೌರವ ಕೊಡುತ್ತಾರಾ? ಕುಮಾರಸ್ವಾಮಿಗೆ ಅವರಾಯ್ತು, ಅವರ ಕುಟುಂಬವಾಯ್ತು.
ಇಡೀ ಸರ್ಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ. ನಿಮ್ಮ ಜತೆಗೆ ನಾವು ನಿಂತು ನಿಮ್ಮ ಸೇವೆ ಮಾಡುತ್ತೇವೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಸಿಕ್ಕ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಿಮ್ಮ ಕೈಗಳು ಬಲಿಷ್ಠವಾದವು ಎಂದರು.
ಶಿವಮೊಗ್ಗ: ನ.12, 13, 14 ಮತ್ತು 15ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut