ಮಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕುರಿತು ವಿರೋಧ ಪಕ್ಷದ ನಾಯಕರಿಂದ ವ್ಯಕ್ತವಾಗುತ್ತಿರುವ ಟೀಕೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಓಬಿಸಿ ಘಟಕದ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, “ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲಾಗಿದೆ” ಎಂದು ತಿಳಿಸಿದ್ದಾರೆ.
ನಿನ್ನೆ (ಮಂಗಳವಾರ) ರಾತ್ರಿ 8.30ರ ವೇಳೆಗೆ ರಾಜ್ಯದಾದ್ಯಂತ ಸರಾಸರಿ 81% ಸಮೀಕ್ಷೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ 38%, ದಕ್ಷಿಣ ಕನ್ನಡದಲ್ಲಿ 68% ಹಾಗೂ ಉಡುಪಿಯಲ್ಲಿ 62% ಪ್ರಗತಿ ದಾಖಲಾಗಿದೆ. ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಕಾರಣದಿಂದ ವಿಳಂಬವಾಗಿದೆ ಎಂದು ಅವರು ತಿಳಿಸಿದರು.
ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ರಜಾ ಸೌಲಭ್ಯವನ್ನು ಹೊಂದಾಣಿಕೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. “ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 220 ಬೋಧನಾ ದಿನಗಳು ಅಗತ್ಯವಿದ್ದು, ಸದ್ಯಕ್ಕೆ 240 ದಿನಗಳು ಲಭ್ಯವಿವೆ. ರಜಾ ನೀಡಿದರೂ ಪಾಠ್ಯಕ್ರಮದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ,” ಎಂದರು.
ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಅಶ್ವತ್ಥ ನಾರಾಯಣ ಮತ್ತು ಆರ್. ಅಶೋಕ್ ಅವರ ಹೆಸರನ್ನು ಉಲ್ಲೇಖಿಸಿ ಸಚಿವರು ತೀವ್ರ ವಾಗ್ದಾಳಿ ನಡೆಸಿದರು. “ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸಕರಾದ ನಾವು, ಸಂವಿಧಾನದಲ್ಲಿ ಅವಕಾಶವಿರುವ ಸಮೀಕ್ಷೆಯನ್ನು ಸರ್ಕಾರ ನಡೆಸಲು ಮುಂದಾದಾಗ, ಯಾವ ಮುಖ ಇಟ್ಟುಕೊಂಡು ವಿರೋಧ ಪಕ್ಷದವರು ಅದನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಅವರು, “ಯಡಿಯೂರಪ್ಪ ಮತ್ತು ದೇವೇಗೌಡರುಂತಹ ಪಕ್ವ ನಾಯಕರು ಸಮೀಕ್ಷೆ ವಿರೋಧಿಸಿ ಹೇಳಿಲ್ಲ. ಅವರಿಗೆ ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ ಎಂದು ನಂಬುತ್ತೇನೆ,” ಎಂದರು.
ಸಚಿವ ಮಧು ಬಂಗಾರಪ್ಪ ಅವರು, “ಈ ಸಮೀಕ್ಷೆಯು ಯಾವುದೇ ಜಾತಿ ಅಥವಾ ಧರ್ಮದ ವಿರುದ್ಧವಾದದ್ದಲ್ಲ. ಇದು ಮಾನವೀಯ ಮೌಲ್ಯಗಳ ಆಧಾರದಲ್ಲಿ ಸಮಾನತೆಯನ್ನು ಸಾಧಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಾತ್ಮಕ ದೃಷ್ಟಿಕೋನದಂತೆ ಕೈಗೊಳ್ಳಲಾದ ಪ್ರಯತ್ನವಾಗಿದೆ. ತುಳಿತಕ್ಕೊಳಗಾದ ವರ್ಗಗಳನ್ನು ಮೇಲಕ್ಕೆ ತರಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ,” ಎಂದು ಸಮರ್ಥಿಸಿಕೊಂಡರು.
ಸಚಿವರು ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಲ್ಲಿ ಸುಮಾರು 15,000 ರಿಂದ 18,000 ಜನ ವಾಸ್ತವ್ಯದಲ್ಲಿ ಇಲ್ಲದಿರುವುದು (ವಿದೇಶದಲ್ಲಿ ಅಥವಾ ಬೇರೆಡೆಗೆ ತೆರಳಿರುವುದು) ತಾಂತ್ರಿಕ ಅಡಚಣೆ ಉಂಟುಮಾಡಿದೆ ಎಂದು ವಿವರಿಸಿದರು. ಸಮೀಕ್ಷೆಗೆ ಸಹಕರಿಸದವರ ಕುರಿತು, ಸರ್ಕಾರ ಇರುವ ನಿಯಮಾವಳಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್
ಸುಪ್ರೀಂ ಕೋರ್ಟ್ ಸಿಜೆ ಬಿಆರ್ ಗವಾಯಿ ಮೇಲೆ ಶೋ ಎಸೆತ: ಸಾಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಖಂಡನೆ
ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್ ಬರ್ತಡೇ ಸೆಲಬ್ರೇಷನ್ ಕೇಸ್: ಇಬ್ಬರು ಜೈಲು ಅಧಿಕಾರಿಗಳು ಸಸ್ಪೆಂಡ್