ನವದೆಹಲಿ: ಒಂದು ವೇಳೆ ನೀವು ಹಣ ಇಟ್ಟಿರುವ ಬ್ಯಾಂಕ್ ದಿವಾಳಿಯಾದರೆ (Bank Collapse) ಅಥವಾ ಅದರ ಪರವಾನಗಿ ರದ್ದಾದರೆ ನನ್ನ ಹಣ ವಾಪಸ್ ಸಿಗುತ್ತದೆಯೇ? ಎಂಬ ಆತಂಕ ಅನೇಕರಲ್ಲಿ ಇರುತ್ತದೆ. ಇದಕ್ಕೆ ಉತ್ತರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ಬರುವ ಡಿಐಸಿಜಿಸಿ (DICGC) ಸಂಸ್ಥೆಯು ಗ್ರಾಹಕರಿಗೆ ವಿಮೆಯ ಸುರಕ್ಷತೆಯನ್ನು ಒದಗಿಸುತ್ತದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಆರ್ಬಿಐ ಈ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಬ್ಯಾಂಕ್ ಮುಳುಗಿದ ಸಂದರ್ಭದಲ್ಲಿ ಪ್ರತಿಯೊಬ್ಬ ಗ್ರಾಹಕನಿಗೂ ಗರಿಷ್ಠ ₹5 ಲಕ್ಷದವರೆಗೆ ಹಣ ಸಿಗುವ ಗ್ಯಾರಂಟಿ ಇರುತ್ತದೆ. ಇದು ಅಸಲು (Principal) ಮತ್ತು ಬಡ್ಡಿ (Interest) ಎರಡನ್ನೂ ಒಳಗೊಂಡಿರುತ್ತದೆ. ಅಂದರೆ, ನಿಮ್ಮ ಖಾತೆಯಲ್ಲಿ ₹10 ಲಕ್ಷ ಇದ್ದರೂ ಸಹ ವಿಮೆಯ ಅಡಿಯಲ್ಲಿ ನಿಮಗೆ ಸಿಗುವುದು ಗರಿಷ್ಠ ₹5 ಲಕ್ಷ ಮಾತ್ರ.
ಹಳೆಯ ನಿಯಮದಂತೆ ಹಣಕ್ಕಾಗಿ ವರ್ಷಗಟ್ಟಲೆ ಕಾಯುವ ಅಗತ್ಯವಿಲ್ಲ. ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ 90 ದಿನಗಳ ಒಳಗಾಗಿ ಗ್ರಾಹಕರಿಗೆ ಈ ₹5 ಲಕ್ಷದ ವಿಮಾ ಮೊತ್ತವನ್ನು ಪಾವತಿಸಬೇಕೆಂದು ಆರ್ಬಿಐ ಕಡ್ಡಾಯಗೊಳಿಸಿದೆ.
ನಿಮ್ಮ ಉಳಿತಾಯ ಖಾತೆ (Savings Account), ಸ್ಥಿರ ಠೇವಣಿ (FD), ಚಾಲ್ತಿ ಖಾತೆ (Current Account) ಮತ್ತು ಮರುಕಳಿಸುವ ಠೇವಣಿ (RD) – ಈ ಎಲ್ಲದಕ್ಕೂ ಈ ವಿಮಾ ಸೌಲಭ್ಯ ಅನ್ವಯವಾಗುತ್ತದೆ.
ಒಂದು ವೇಳೆ ನೀವು ಎರಡು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಹಣ ಇಟ್ಟಿದ್ದರೆ, ಎರಡೂ ಬ್ಯಾಂಕ್ಗಳಿಗೆ ತಲಾ ₹5 ಲಕ್ಷದವರೆಗೆ ಪ್ರತ್ಯೇಕ ವಿಮಾ ರಕ್ಷಣೆ ಸಿಗುತ್ತದೆ. ಆದರೆ ಒಂದೇ ಬ್ಯಾಂಕಿನ ಬೇರೆ ಬೇರೆ ಬ್ರಾಂಚ್ಗಳಲ್ಲಿ ಖಾತೆ ಇದ್ದರೆ ಅವೆಲ್ಲವನ್ನೂ ಸೇರಿಸಿ ಒಂದೇ ಎಂದು ಪರಿಗಣಿಸಲಾಗುತ್ತದೆ.
ಆರ್ಬಿಐ ಈಗ ‘ರಿಸ್ಕ್ ಬೇಸ್ಡ್ ಪ್ರೀಮಿಯಂ’ ಮಾದರಿಯನ್ನು ಜಾರಿಗೆ ತರುತ್ತಿದೆ. ಇದರಡಿ ಸದೃಢವಾಗಿರುವ ಬ್ಯಾಂಕ್ಗಳು ಕಡಿಮೆ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟಲಿವೆ. ಆದರೆ, ಇದರಿಂದ ಗ್ರಾಹಕರಿಗೆ ಸಿಗುವ ₹5 ಲಕ್ಷದ ವಿಮಾ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ನಿಮ್ಮ ಹಣದ ಸುರಕ್ಷತೆ ಮೊದಲಿನಂತೆಯೇ ಇರಲಿದೆ.








