ನಮಗೆ ಕೆಲಸವಿಲ್ಲದೆ ಖಾಲಿ ಕುಳಿತಾಗ ಅಥವಾ ಒಂದೇ ಕೆಲಸವನ್ನು ಪದೇ ಪದೇ ಮಾಡಿದಾಗ ‘ಬೇಸರ’ (Boredom) ಎನಿಸುವುದು ಸಹಜ. ಆದರೆ, ಈ ಬೇಸರ ಎಂಬುದು ಕೇವಲ ಒಂದು ಭಾವನೆಯಲ್ಲ, ಇದು ನಿಮ್ಮ ಮೆದುಳು ನೀಡುವ ಅತ್ಯಂತ ಪ್ರಬಲವಾದ ಸಂಕೇತ. ನಮಗೆ ಬೇಸರವಾದಾಗ ನಮ್ಮ ಮೆದುಳಿನ ಜೀವಕೋಶಗಳ ಒಳಗೆ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಬಗ್ಗೆ ವಿಜ್ಞಾನಿಗಳು ಬೆಚ್ಚಿಬೀಳುವ ಮಾಹಿತಿ ನೀಡಿದ್ದಾರೆ.
ನಮಗೆ ಬೇಸರವಾದಾಗ ಮೆದುಳಿನ ‘ಡಿಫಾಲ್ಟ್ ಮೋಡ್ ನೆಟ್‌ವರ್ಕ್’ ಎಂಬ ಭಾಗವು ಎಚ್ಚರಗೊಳ್ಳುತ್ತದೆ. ನಾವು ಯಾವುದೇ ನಿರ್ದಿಷ್ಟ ಕೆಲಸ ಮಾಡದಿದ್ದಾಗ ಈ ಭಾಗವು ಕೆಲಸ ಮಾಡಲು ಶುರು ಮಾಡುತ್ತದೆ. ಇದು ನಮ್ಮನ್ನು ಹಗಲುಗನಸು (Daydreaming) ಕಾಣುವಂತೆ ಮಾಡುತ್ತದೆ ಮತ್ತು ಹಳೆಯ ನೆನಪುಗಳನ್ನು ಕೆದಕುತ್ತದೆ.
ಸಂಶೋಧನೆಗಳ ಪ್ರಕಾರ, ಬೇಸರವು ಮೆದುಳಿಗೆ ಹೊಸ ಆಲೋಚನೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ಮೆದುಳು ಹೊಸ ಸವಾಲುಗಳನ್ನು ಬಯಸುವುದರಿಂದ, ಅದು ವಿಭಿನ್ನವಾಗಿ ಯೋಚಿಸಲು ಶುರು ಮಾಡುತ್ತದೆ. ಅನೇಕ ದೊಡ್ಡ ಆವಿಷ್ಕಾರಗಳು ಮನುಷ್ಯನಿಗೆ ‘ಬೋರ್’ ಆದಾಗಲೇ ಹುಟ್ಟಿಕೊಂಡಿವೆ!
ಮೆದುಳಿಗೆ ಹೊಸತನ ಅಥವಾ ಕುತೂಹಲ ಸಿಗದಿದ್ದಾಗ ‘ಡೋಪಮೈನ್’ ಎಂಬ ಹ್ಯಾಪಿ ಹಾರ್ಮೋನ್ ಮಟ್ಟ ಕುಸಿಯುತ್ತದೆ. ಈ ಕೊರತೆಯನ್ನು ತುಂಬಲು ಮೆದುಳು ತಕ್ಷಣವೇ ಯಾವುದಾದರೂ ಹೊಸ ವಿಷಯಕ್ಕಾಗಿ (ಉದಾಹರಣೆಗೆ ಮೊಬೈಲ್ ನೋಡುವುದು ಅಥವಾ ತಿನ್ನುವುದು) ಹಂಬಲಿಸುತ್ತದೆ.ದೀರ್ಘಕಾಲದ ಬೇಸರವು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸದಾ ಅಸಮಾಧಾನ ಮೂಡುವಂತೆ ಮಾಡುತ್ತದೆ.








