ಬೆಂಗಳೂರು: ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭಾರತೀಯ ಮಧ್ಯಮ ವರ್ಗದವರ ಅಶೋತ್ತರಗಳಿಗೆ ಸ್ಪಂದಿಸುವ ಬಜೆಟ್, ಭಾರತೀಯ ಆರ್ಥಿಕತೆಗೆ ಆದ್ಯತೆ ನೀಡಿದ ಬಜೆಟ್ ಮತ್ತು ಮಾನ್ಯ ಪ್ರಧಾನ ಮಂತ್ರಿಗಳ ವಿಕ್ಸಿತ್ ಭಾರತ್ ಕನಸನ್ನು ಸಾಕಾರ ಮಾಡುವ ಬಜೆಟ್ ಎಂದು ಕೇಂದ್ರ ಜಲಶಕ್ತಿ ಮತ್ತು ರೇಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಬಣ್ಣಸಿದ್ದಾರೆ.
ಭಾರತ ಕೃಷಿಕರ ದೇಶ, ಕೃಷಿಕರ ಎಳಿಗೆಗೆ ಪ್ರಧಾನ ಮಂತ್ರಿ ಧನಧ್ಯಾನ್ಯ ಕೃಷಿ ಯೋಜನೆಯನ್ನು 2025-26ರ ಬಜೆಟ್‌ನಲ್ಲಿ ಘೋಷಿಸಿದ್ದು, ಪ್ರಥಮವಾಗಿ ದೇಶದ 100 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುದು. ಕಡಿಮೆ ಇಳುವರಿ ತಡೆಗಟ್ಟಲು ಈ ಯೋಜನೆ ಜಾರಿಗೊಳಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಕೃಷಿಕರಿಗೆ ಉತ್ತಮ ಗುಣ ಮಟ್ಟದ ಬೀಜ, ರಸಗೊಬ್ಬರ ಖರೀದಿ ಮತ್ತು ತಂತ್ರಜ್ಷಾನ ಅಳವಡಿಕೆಗೆ ಈ ಯೋಜನೆ ಸಹಕಾರಿಯಾಗಲಿದೆ. ರಸಗೊಬ್ಬರದ ಉತ್ಪಾದನೆಯಲ್ಲಿ ಸ್ವಾವಲಂಭಿತ್ವ ಸಾಧಿಸಲು ಯೋಜನೆ ಸಿದ್ದಪಡಿಸಲಾಗಿದೆ. ಆಸ್ಸಾಂನಲ್ಲಿ 12.7 ಎಲ್.ಎಮ್.ಟಿ ಸಾಮರ್ಥ್ಯದ ಯೂರಿಯಾ ಪ್ಲಾಂಟ್ ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಲು 10ಸಾವಿರ ವೈದ್ಯಕೀಯ ಸೀಟನ್ನು ಹೆಚ್ಚುವರಿಯಾಗಿ ಈ ಬಜೆಟ್‌ನಲ್ಲಿ ನೀಡಲಾಗಿದೆ. 36 ಜೀವ ರಕ್ಷಕ ಔಷಧಗಳಿಗೆ ಸಂಪೂರ್ಣ ಸುಂಕ ವಿನಾಯತಿ ನೀಡಲಾಗಿದೆ. ದೇಶಿಯ ಜೀವರಕ್ಷಕ ಔಷಧ ತಯಾರಿಕೆಗೆ ಸುಂಕ ವಿನಾಯಿತಿ ಮೂಲಕ ಉತ್ತೇಜನ ನೀಡಲಾಗಿದೆ ಎಂದಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳಾ ಉದ್ಯಮದಾರರಿಗೆ ಆರ್ಥಿಕ ಸೌಲಭ್ಯ ಒದಗಿಸುವ ನೂತನ ಯೋಜನೆ ಜಾರಿಗೊಳಿಸಿಲಾಗಿದೆ. ಗ್ರಾಮೀಣ ಭಾಗದ ಎಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಬ್ರಾಡ್-ಬ್ಯಾಂಡ್ ಸಂಪರ್ಕ ನೀಡಲು ಈ ಬಜೆಟ್ ನಲ್ಲಿ ಅವಕಾಶ ನೀಡಲಾಗಿದೆ, ಹಳ್ಳಿಗಳ ಅಭಿವೃದ್ದಿಗೆ ಆದ್ಯತೆ ನೀಡಿ ಭಾರತೀಯ ಅಂಚೆ ನವೀಕರಿಸುವ ಮೂಲಕ ಗ್ರಾಮೀಣ ಭಾಗದ 1.5 ಲಕ್ಷ ಅಂಚೆ ಕೇಂದ್ರಗಳನ್ನು ಅಭಿವೃದ್ಧಿ ಮಾಡಲಾಗುವುದು ಇದು ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಒತ್ತು ನೀಡಿದ ಬಜೆಟ್ ಎಂದು ತಿಳಿಸಿದ್ದಾರೆ.
ಈಗಾಗಲೇ 68 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ ಉಪಯೋಗವಾಗಿರುವ ಪಿ.ಎಮ್. ಸ್ವನಿಧಿಯ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚುವರಿ ಸಾಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ. ದೇಶದಾದ್ಯಂತ 50 ಪ್ರವಾಸಿ ತಾಣಗಳನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು. ಕೇಂದ್ರದ ಜಲಶಕ್ತಿ ಇಲಾಖೆಯಡಿಯಲ್ಲಿ ‘ಜಲ್ ಜೀವನ್ ಮಿಷನ್ ಯೋಜನೆಯನ್ನು 2019ರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳು ಜಾರಿಗೆ ತಂದಿದ್ದು, ಈವರೆಗೆ 19.36 ಕೋಟಿ ಮನೆಗಳಿಗೆ ಕೊಳವೆ ಮೂಲಕ ಶುದ್ದ ಕುಡಿಯುವ ನೀರನ್ನು ಕಲ್ಪಿಸಲಾಗಿದೆ. 2028ರವರೆಗೆ 100% ಗುರಿ ಸಾಧಿಸುವ ಗುರಿಯನ್ನು ಹೊಂದಿ ಈ ಬಜೆಟ್‌ನಲ್ಲಿ ಈ ಯೋಜನೆ ಅವಧಿ 2028ರವರೆಗೆ ವಿಸ್ತರಿಸಲಾಗಿದೆ. ಇದಕ್ಕೆ ಬೇಕಾದ ಅವಶ್ಯಕ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ ಎಂದಿದ್ದಾರೆ.
ರೇಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ ರೂ2.65ಲಕ್ಷ ಕೋಟಿ ಅನುದಾನ ನೀಡಲಾಗಿತ್ತು. ಈ ಬಜೆಟ್‌ನಲ್ಲಿಯೂ ಸಹ ರೂ. 2.65 ಲಕ್ಷ ಕೋಟಿ ನೀಡಲಾಗಿದೆ. ಈ ಪೈಕಿ ಪ್ರಯಾಣಿಕರ ಸವಲತ್ತುಗಳಿಗಾಗಿರೂ. 12 ಸಾವಿರ ಕೋಟಿ, ಸುರಕ್ಷತೆ ವ್ಯವಸ್ಥೆಗಳಿಗಾಗಿ ರೂ.1,16,500 ಕೋಟಿ ಮೀಸಲಿಡಲಾಗಿದೆ (ಕಳೆದ ವರ್ಷ : ರೂ.1,14,000 ಕೋಟಿ ಇತ್ತು).
ರೇಲ್ವೆ ಸುರಕ್ಷತೆಗೆ ಕವಚ್ 4ಓ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ಪ್ರಯೋಗ ನೆಡಸಲಾಗಿದೆ. ಕವಚ್ ದೇಶಿಯ ತಂತ್ರಜ್ಷಾನ ಆಧಾರಿತವಾಗಿದೆ ಮತ್ತು ಪರೀಕ್ಷೆ ಯಶಸ್ವಿಯಾಗಿದೆ. ಸುಮಾರು 10,000 ರೇಲ್ವೆ ಇಂಜಿನಗಳಿಗೆ ಕವಚ್ ಅಳವಡಿಸಲಾಗುವುದು. ಈ ಕಾರ್ಯ ಪ್ರಗತಿಯಲ್ಲಿದೆ. ನವದೆಹಲಿ – ಮುಂಬೈ ಮತ್ತು ನವದೆಹಲಿ-ಕಲ್ಕತ್ತಾ ಮಾರ್ಗದಲ್ಲಿ ಡಿಸೆಂಬರ್ ೨೦೨೫ರಲ್ಲಿ ಕವಚ್ ಅಳವಡಿಕೆ ಮುಗಿಯಲಿದೆಯೆಂದು ತಿಳಿಸಿದ್ದಾರೆ.
2025 ಭಾರತೀಯ ರೇಲ್ವೆಯ ವಿದ್ಯುದೀಕರಣ ಶತಮಾನೋತ್ಸವ ವರ್ಷವೆಂದು ಬಣ್ಣಿಸಿ, 100% ಇಲೆಕ್ಟಿçಪಿಕೆಶನ್ ಮುಗಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 2025-26ರಲ್ಲಿ non ac ಅಮೃತ್ ಭಾರತ್ ರೈಲು ಪ್ರಾರಂಭಿಸಲಾಗುವುದು, ಪ್ರಾರಂಭದಲ್ಲಿ 100 ಅಮೃತ್ ಭಾರತ್ ರೇಲ್ವೆ ತಯಾರಿಸಲಾಗುತ್ತಿದೆ. ಅಹ್ಲಾದಕರ ಪ್ರಯಾಣ ವ್ಯವಸ್ಥೆ ಅಮೃತ್ ಭಾರತ್ ರೇಲ್ವೆಯಲ್ಲಿ ದೊರಕಲಿದೆ. ಮುಂದಿನ 4 ವರ್ಷಗಳಲ್ಲಿ 1300ಕ್ಕೂ ಹೆಚ್ಚು ರೇಲ್ವೆ ನಿಲ್ದಾಣಗಳನ್ನು ಅಭವೃದ್ದಿ ಪಡಿಸಲಾಗುವುದು. ವಂದೇ ಸ್ಲೀಪರ್ ಕೋಚ್ ಪರೀಕಾರ್ಥವಾಗಿ ಚಲನೆಯಲ್ಲಿದೆ. 50 ವಂದೇ ಭಾರತ್ ಸ್ಲೀಪರ್ ಟ್ರೇನ್2025-26ಮತ್ತು 2026-27ರಲ್ಲಿ ಸಿದ್ದಪಡಿಸಿ ಲೋಕಾರ್ಪಣೆಗೊಳಿಸಲಾಗುವುದು. ಇವು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆಯೆಂದು ತಿಳಿಸಿದ್ದಾರೆ.
ಕಳೆದ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ ರೂ.7559 ಕೋಟಿ ಇತ್ತು, ಈ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ ರೂ.7564 ಕೋಟಿ ನೀಡಲಾಗಿದೆ. ಸಬ್ ಅರ್ಬನ್ ರೇಲ್ವೆಗೆ ಕಳೆದ ಬಾರಿ 350 ಕೋಟಿ ನೀಡಲಾಗಿದೆ. ಈ ಬಜೆಟ್ ನಲ್ಲಿಯೂ ಸಹ ರೂ. 350 ಕೋಟಿ ನೀಡಲಾಗಿದೆ.
ಜನಪ್ರೀಯ ಬಜೆಟ್ ನೀಡಿದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ರೇಲ್ವೆ ಹಾಗೂ ಜಲ ಜೀವನ್ ಮಿಶನ್‌ಗೆ ಆದ್ಯತೆ ನೀಡಿ, ದೇಶದ ಸರ್ವಾಂಗಿಣ ಅಭಿವೃದ್ದಿಗೆ ನೀಡಿದ ಕೊಡುಗೆಯನ್ನು ನಾನು ಅತ್ಯಂತ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಇದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
BREAKING: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 8 ನಕ್ಸಲರು ಹತ್ಯೆ
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab