ಬೆಂಗಳೂರು: ರಾಜ್ಯ ಸರ್ಕಾರವು ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಆಯಾ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳನ್ನೇ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನಾಗಿ ನಿಯೋಜಿಸಿದೆ. ಹಾಗಾದ್ರೇ ಹೀಗೆ ನೇಮಕಗೊಂಡ ಗ್ರಾಮ ಪಂಚಾಯ್ತಿಗಳ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯಗಳು ಏನು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ..
ರಾಜ್ಯದ ಬಹುತೇಕ ಗ್ರಾಮ ಪಂಚಾಯತಿಗಳ ವರ್ಷಗಳ ಅವಧಿಯು 4 ನೇ ಜೂನ್ 2020 ರಿಂದ ಪ್ರಾರಂಭವಾಗಿ ವಿವಿಧ ದಿನಾಂಕಗಳಂದು ಪೂರ್ಣಗೊಳ್ಳುತ್ತದೆ. ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದಿರುವ ಕಾರಣ, 5 ವರ್ಷದ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 8(1)(ಬಿ)(ii) ಅನ್ನು ಪ್ರಕರಣ 321 ಓದಿಕೊಂಡಂತೆ ಸದರಿ ಅಧಿನಿಯಮದ ಪ್ರಕರಣ 41 ಮತ್ತು 42 ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಆದುದರಿಂದ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದೆ.
1. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 8(4) ರನ್ವಯ ಆಡಳಿತಾಧಿಕಾರಿಯನ್ನು ಈ ಅಧಿನಿಯಮದ ಉದ್ದೇಶಕ್ಕಾಗಿ ಕ್ರಮಬದ್ಧವಾಗಿ ರಚಿಸಿದ ಗ್ರಾಮ ಪಂಚಾಯತಿ ಎಂದು ಭಾವಿಸಲಾಗಿದೆ.
2. ಸದರಿ ಅಧಿನಿಯಮದ ಪ್ರಕರಣ 8 (3) ರನ್ವಯ ಆಡಳಿತಾಧಿಕಾರಿಯು ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸತಕ್ಕದ್ದು ಮತ್ತು ನೆರವೇರಿಸತಕ್ಕದ್ದಾಗಿದೆ.
3. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರನ್ವಯ ಗ್ರಾಮ ಪಂಚಾಯತಿಯ ಹಣಕಾಸಿನ ವ್ಯವಹಾರವನ್ನು ಆಡಳಿತಾಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸತಕ್ಕದ್ದು.
4. ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
5. ಅಧಿನಿಯಮದ ಪ್ರಕರಣ 58 ರಂತೆ ಗ್ರಾಮ ಪಂಚಾಯತಿ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು.
6. ಅಧಿನಿಯಮದ ಪ್ರಕರಣ 60 ರಂತೆ ಗ್ರಾಮ ಪಂಚಾಯತಿಯ ಸಾಮಾನ್ಯ ಅಧಿಕಾರಗಳನ್ನು ಚಲಾಯಿಸತಕ್ಕದ್ದು.
7. ಅಧಿನಿಯಮದ ಪ್ರಕರಣ 62 ರಂತೆ ಅಧ್ಯಕ್ಷನ ಪ್ರಕಾರ್ಯಗಳು ಮತ್ತು ಅಧಿಕಾರಗಳನ್ನು ಚಲಾಯಿಸತಕ್ಕದ್ದು.
8. ಕೋವಿಡ್-19 (ಕೋರೊನಾ ವೈರಸ್) ಹರಡದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ಕಾರ್ಯಪಡೆಯನ್ನು ಸರ್ಕಾರದ ಸುತ್ತೋಲೆ ಸಂಖ್ಯೆ: ಗ್ರಾಅಪ 86 ಉಖಾಯೋ 2019 ದಿನಾಂಕ:27-03-2020 ರಚಿಸಲಾಗಿದ್ದು, ಆಡಳಿತಾಧಿಕಾರಿಯು ಅಧ್ಯಕ್ಷರಾಗಿರುವುದರಿಂದ ಸದರಿ ಕಾರ್ಯಪಡೆಯ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.
9. ಗ್ರಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಲಾಗಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆ ಮಾಡತಕ್ಕದ್ದು ಮತ್ತು ಗ್ರಂಥಾಲಯ ಮೇಲ್ವಿಚಾರಕರಿಗೆ ಗೌರವಧನವನ್ನು ಮಾಸಿಕವಾಗಿ ಪಾವತಿಸತಕ್ಕದ್ದು.
10. ಗ್ರಾಮ ಪಂಚಾಯತಿ ನೌಕರರಿಗೆ ಮಾಸಿಕವಾಗಿ ಕನಿಷ್ಠ ವೇತನ ಪಾವತಿಸತಕ್ಕದ್ದು.
11. ಸರ್ಕಾರದ ಸುತ್ತೋಲೆ ಸಂಖ್ಯೆ: ಗ್ರಾಅಪ 74 ಗ್ರಾಪಂಸಿ 2017 (ಭಾಗ-1) ದಿನಾಂಕ: 12-03-2018 ರಲ್ಲಿ ಗ್ರಾಮ ಪಂಚಾಯಿತಿಗಳು ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆಡಳಿತಾಧಿಕಾರಿಯು ಗ್ರಾಮ ಪಂಚಾಯತಿಗೆ ಯಾವುದೇ ನೌಕರರನ್ನು ನೇಮಕ ಮಾಡಿಕೊಳ್ಳತಕ್ಕದ್ದಲ್ಲ ಎಂಬುದಾಗಿ ದಿನಾಂಕ 19-06-2020ರ ಸುತ್ತೋಲೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದಂತ ಉಮಾ ಮಹದೇವನ್ ತಿಳಿಸಿದ್ದಾರೆ.

ಶೀಘ್ರವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಾವಳಿ ಕುರಿತು ನಿರ್ಧಾರ ಪ್ರಕಟ: ಗೃಹ ಸಚಿವ ಡಾ.ಜಿ ಪರಮೇಶ್ವರ್
BIG NEWS : ಹಲವು ಷರತ್ತುಗಳೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘RCB’ ಪಂದ್ಯಕ್ಕೆ ಅನುಮತಿ ಸಾಧ್ಯತೆ!








