ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. “ಮಂಗಳವಾರದೊಳಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಒಪ್ಪಂದಕ್ಕೆ ಬರದಿದ್ದರೆ, ಇಡೀ ಇರಾನ್ ದೇಶವನ್ನೇ ಸ್ಫೋಟಿಸುತ್ತೇವೆ” ಎಂದು ಟ್ರಂಪ್ ಅಲ್ಟಿಮೇಟಂ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಒಪ್ಪಂದವಾಗದಿದ್ದರೆ ಮಂಗಳವಾರದ ದಿನವನ್ನು ಇರಾನ್‌ನ ‘ಪವರ್ ಪ್ಲಾಂಟ್ ಡೇ’ ಮತ್ತು ‘ಬ್ರಿಡ್ಜ್ ಡೇ’ ಎಂದು ಘೋಷಿಸಲಾಗುವುದು” ಎಂದಿದ್ದಾರೆ. ಅಂದರೆ ಇರಾನ್‌ನ ಎಲ್ಲಾ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಇರಾನ್ ಸದ್ಯ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇದು ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿದ್ದು, ಇದನ್ನು ತಕ್ಷಣವೇ ತೆರೆಯಬೇಕು ಎಂಬುದು ಅಮೆರಿಕದ ಹಠವಾಗಿದೆ.
“ಮಂಗಳವಾರ ರಾತ್ರಿ 8 ಗಂಟೆಯ ಒಳಗೆ (ಅಮೆರಿಕ ಕಾಲಮಾನ) ಇರಾನ್ ತನ್ನ ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ ಆ ದೇಶ ನರಕವನ್ನು ಅನುಭವಿಸಲಿದೆ” ಎಂದು ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ.








