ನವದೆಹಲಿ: ದೇಶಾದ್ಯಂತ ಮದುವೆ ಸೀಸನ್ ಅದ್ದೂರಿಯಾಗಿ ಶುರುವಾಗಿದ್ದರೂ, ಅಡುಗೆ ಮನೆಯಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ‘ಬೆಂಕಿ’ ಬಿದ್ದಂತಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ತೀವ್ರ ಅಭಾವ ಮತ್ತು ಬೆಲೆ ಏರಿಕೆಯು ಮದುವೆ ಸಮಾರಂಭಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಡುಗೆಯವರಾದಿಯಾಗಿ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಮಾರುಕಟ್ಟೆಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅನೇಕ ಕಲ್ಯಾಣ ಮಂಟಪಗಳು ಮತ್ತು ಹೋಟೆಲ್‌ಗಳು ಈಗ “ಗ್ಯಾಸ್ ಸಿಲಿಂಡರ್‌ಗಳನ್ನು ನೀವೇ ತಂದುಕೊಡಿ” ಎಂದು ಮದುವೆ ನಿಶ್ಚಯಿಸಿದ ಮನೆಯವರಿಗೆ ಮುನ್ನೆಚ್ಚರಿಕೆ ನೀಡುತ್ತಿವೆ.
ಮೆನುವಿನಲ್ಲಿ ಕಡಿತ: ಗ್ಯಾಸ್ ಉಳಿತಾಯ ಮಾಡುವ ಉದ್ದೇಶದಿಂದ ಕ್ಯಾಟರರ್‌ಗಳು ಮದುವೆಯ ಮೆನುವಿನಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಅತಿಯಾದ ಉರಿಯಲ್ಲಿ ಹೆಚ್ಚು ಹೊತ್ತು ಬೇಯಿಸಬೇಕಾದ ಖಾದ್ಯಗಳ ಬದಲಿಗೆ, ಬೇಗನೆ ತಯಾರಾಗುವ ಪದಾರ್ಥಗಳಿಗೆ ಆದ್ಯತೆ ನೀಡಲಾಗುತ್ತಿದೆ. ಲೈವ್ ಕೌಂಟರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ.
ಏಪ್ರಿಲ್ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹195 ರಿಂದ ₹218 ರವರೆಗೆ ಏರಿಕೆಯಾಗಿದ್ದು, ಮದುವೆ ಬಜೆಟ್ ಅನ್ನು ಏರುಪೇರು ಮಾಡಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ನಡೆದ ಐದನೇ ಬೆಲೆ ಏರಿಕೆಯಾಗಿದೆ.ಗ್ಯಾಸ್ ಕೊರತೆಯಿಂದಾಗಿ ಅನಿವಾರ್ಯವಾಗಿ ಹಳೆಯ ಕಾಲದ ಕಟ್ಟಿಗೆ ಒಲೆಗಳು (Wood-based cooking) ಮತ್ತು ಡೀಸೆಲ್ ಬರ್ನರ್‌ಗಳ ಮೊರೆ ಹೋಗಲಾಗುತ್ತಿದೆ. ಸಾಂಪ್ರದಾಯಿಕ ‘ಚುಲ್ಹಾ’ಗಳ ಬಳಕೆ ಮದುವೆ ಮನೆಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ.








