ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಲೇ ಸಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿ (Heat wave) ಆರಂಭವಾಗಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 35°C ದಾಟಿದ್ದು, ಮಲೆನಾಡಿನ ಭಾಗಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದ್ದರೂ ಸೆಖೆ ಕಡಿಮೆಯಾಗಿಲ್ಲ.
ಕಲ್ಯಾಣ ಕರ್ನಾಟಕದಲ್ಲಿ ದಗಿ ದಗಿ: ಬಿಸಿಲನಾಡು ಎಂದು ಕರೆಯಲ್ಪಡುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ 38°C ದಾಟಿದೆ. ಅದರಲ್ಲೂ ಕಲಬುರಗಿಯಲ್ಲಿ 40°C ದಾಖಲಾಗುವ ಮೂಲಕ ಅತಿ ಹೆಚ್ಚು ಉಷ್ಣಾಂಶವಿರುವ ಜಿಲ್ಲೆಯಾಗಿದೆ.
ಕರಾವಳಿ ಭಾಗ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35°C ಹಾಗೂ ಕನಿಷ್ಠ ಉಷ್ಣಾಂಶ 26°C ದಾಟಿದೆ.
ಜಿಲ್ಲಾವಾರು ಪರಿಸ್ಥಿತಿ:
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಅತ್ಯಂತ ಶುಷ್ಕ ವಾತಾವರಣವಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದರೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ರಾತ್ರಿಯಲ್ಲೂ ಸೆಖೆಯ ಕಾಟ:
ಈ ಬಾರಿ ದೇಶದ ಬಹುತೇಕ ಭಾಗಗಳಲ್ಲಿ ವಿಚಿತ್ರ ಹವಾಮಾನ ಕಂಡುಬಂದಿದೆ. ಸಾಮಾನ್ಯವಾಗಿ ಸೂರ್ಯ ಮುಳುಗಿದ ನಂತರ ವಾತಾವರಣ ತಂಪಾಗುತ್ತಿತ್ತು, ಆದರೆ ಈ ವರ್ಷ ರಾತ್ರಿಯ ವೇಳೆಯಲ್ಲೂ ಕನಿಷ್ಠ ಉಷ್ಣಾಂಶ 20°C ರಿಂದ 27°C ವರೆಗೆ ದಾಖಲಾಗುತ್ತಿರುವುದರಿಂದ ರಾತ್ರಿಯಲ್ಲೂ ಬಿಸಿಯ ಅನುಭವವಾಗುತ್ತಿದೆ.








