ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಾವು ಬಿಜೆಪಿ ಪಕ್ಷದವರ ಹಾಗೆ 28 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸುಳ್ಳು ಹೇಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉಳಿದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಯಾವುದೇ ಕಗ್ಗಂಟಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಾವು ಬಿಜೆಪಿ ಪಕ್ಷದವರ ಹಾಗೆ 28 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸುಳ್ಳು ಹೇಳುವುದಿಲ್ಲ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಮೈಸೂರು, ಚಾಮರಾಜನಗರ ಕ್ಷೇತ್ರವನ್ನೂ ಸೇರಿಸಿದಂತೆ ರಾಜ್ಯದ ಎಲ್ಲಾ 28 ಕ್ಷೇತ್ರವನ್ನೂ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ಜನರಿಗೆ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಲಾಗಿದೆ. ಗ್ಯಾರಂಟಿಗಳಿಗೆ ಈ ವರ್ಷ ₹36,000 ಕೋಟಿ ಹಾಗೂ ಮುಂದಿನ ವರ್ಷ ₹52,009 ಕೋಟಿ ವೆಚ್ಚ ಮಾಡಲಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳದೇ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮಾಡಿರುವ ಸಾಧನೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಲಿದ್ದು, ಜನತೆ ವಿಧಾನಸಭಾ ಚುನಾವಣೆಯಂತೆ ನಮ್ಮ ಪಕ್ಷದ ಕೈ ಹಿಡಿಯಲಿದ್ದಾರೆ. ಬಿಜೆಪಿಯವರು ನುಡಿದಂತೆ ನಡೆಯಲಿಲ್ಲ. 2018 ರಲ್ಲಿ ಬಿಜೆಪಿಯವರು ನೀಡಿದ 600 ಭರವಸೆಗಳಲ್ಲಿ ಶೇ. 10 ರಷ್ಟನ್ನೂ ಈಡೇರಿಸಲಿಲ್ಲ. ಪ್ರಧಾನಿ ಮೋದಿ ಅವರೂ ಜನರ ಖಾತೆಗಳಿಗೆ 15 ಲಕ್ಷ ರೂ.ಗಳಾಗಲಿ, 20 ಕೋಟಿ ಉದ್ಯೋಗವಾಗಲಿ, ರೈತರ ಆದಾಯ ದ್ವಿಗುಣಗೊಳಿಸುವ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ? ಎಂದರು.