ಜೇವರ್ಗಿ: “ಕಲ್ಯಾಣ ಕರ್ನಾಟಕ ಭಾಗದ ಜನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಮಗೆ ಶಕ್ತಿ ತುಂಬಿದ್ದು, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ನಿಮ್ಮೆಲ್ಲರ ಋಣ ತೀರಿಸಲಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಜೇವರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 1150 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯ “ಕಲ್ಯಾಣ ಪಥ” ಯೋಜನೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ದೇಶಕ್ಕೆ ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ, ಸರ್ದಾರ್ ಪಟೇಲ್ ಸೇರಿದಂತೆ ಅನೇಕರು ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಈ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಟ್ಟವರು ಮಲ್ಲಿಕಾರ್ಜುನ ಖರ್ಗೆ ಅವರು. ಖರ್ಗೆ ಅವರು ಹಾಗೂ ಧರ್ಮಸಿಂಗ್ ಅವರು ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರಿಗೆ ಮನದಟ್ಟು ಮಾಡಿ ಈ ಭಾಗದ ಅಭಿವೃದ್ಧಿಗೆ ಆರ್ಟಿಕಲ್ 371ಜೆ ಜಾರಿಗೆ ತಂದಿದ್ದಾರೆ. ಅಂದು ಲಾಲಕೃಷ್ಣ ಆಡ್ವಾಣಿ ಅವರು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅದನ್ನು ಸಾಧ್ಯಮಾಡಿ ತೋರಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ” ಎಂದು ತಿಳಿಸಿದರು.
“ಈ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶಪಥ ಮಾಡಿದ ಕಾಂಗ್ರೆಸ್ ಪಕ್ಷ ಪ್ರತಿ ವರ್ಷ ರಾಜ್ಯ ಬಜೆಟ್ ನಲ್ಲಿ 5 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಈ ಭಾಗದ ಅಭಿವೃದ್ಧಿಗೆ ನೀಡುತ್ತಿದ್ದೇವೆ. ಶುಕ್ರವಾರ ಮಂಡನೆಯಾದ ಬಜೆಟ್ ನಲ್ಲೂ ನಾವು ಈ ಹೆಚ್ಚುವರಿ ಮೊತ್ತ ನೀಡಿದ್ದೇವೆ. ಆಮೂಲಕ ಈ ಭಾಗದ ಪ್ರತಿ ಕ್ಷೇತ್ರಕ್ಕೆ ಸರಿಸುಮಾರು ರೂ. 120 ಕೋಟಿ ಹಣ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಸಿಗುತ್ತಿದೆ” ಎಂದರು.
“ನಮ್ಮ ಕ್ಷೇತ್ರಗಳಿಗಿಂತ ಕಲ್ಯಾಣ ಕರ್ನಾಟಕ ಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಹಣ ಸಿಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದಿಂದ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ ಮೀಸಲಾತಿ ನೀಡಿ ಭವಿಷ್ಯ ರೂಪಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಖರ್ಗೆ ಅವರ ಆತ್ಮಸ್ಥೈರ್ಯವನ್ನು ತುಂಬಿಸುವ ಕೆಲಸ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಕೋಟಿ ನಮನ ಸಲ್ಲಿಸುತ್ತೇನೆ” ಎಂದರು.
“ಯುದ್ಧ ಗೆಲ್ಲುವವನು ವೀರನಲ್ಲ, ಜನರ ಮನಸ್ಸು ಗೆಲ್ಲುವವನು ನಿಜವಾದ ವೀರ. ನಿಮ್ಮೆಲ್ಲರ ಹೃದಯ ಗೆದ್ದವರು ಮಲ್ಲಿಕಾರ್ಜುನ ಖರ್ಗೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನೀವು ಈ ಭಾಗದಲ್ಲಿ ಇಎಸ್ಐ ಆಸ್ಪತ್ರೆ ನೋಡಿದ್ದೀರಿ. ಬೆಂಗಳೂರಿನ ವಿಧಾನಸೌಧ ನೋಡಿದರೆ ಕೆಂಗಲ್ ಹನುಮಂತಯ್ಯ ಅವರು ನೆನಪಾಗುತ್ತಾರೆ. ಇಲ್ಲಿರುವ ಇಎಸ್ಐ ಆಸ್ಪತ್ರೆ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಅವರು ನೆನಪಾಗುತ್ತಾರೆ. ಈಗ ಕಿದ್ವಾಯಿ ಆಸ್ಪತ್ರೆ ಈ ಭಾಗಕ್ಕೆ ಬಂದಿದೆ. ಕೇಂದ್ರ ವಿವಿ, ಶಾಲೆಗಳು ನಿಮ್ಮ ಕ್ಷೇತ್ರಗಳಲ್ಲಿ ತಲೆಎತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಂಡಳಿ ಸ್ಥಾಪಿಸಿ ಅದಕ್ಕೆ ಶಕ್ತಿ ತುಂಬಲಾಗುತ್ತಿದೆ. ಇಂದು ಚಾಲನೆ ನೀಡಿರುವ ರೂ.1,100 ಕೋಟಿಯ ಮೊತ್ತದ ಕಲ್ಯಾಣ ಪಥ ಯೋಜನೆಯಿಂದ ಪ್ರತಿ ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಾಗಿ 25-30 ಕೋಟಿ ಹಣ ಸಿಗಲಿದೆ” ಎಂದು ವಿವರಿಸಿದರು.
“ಈ ಭಾಗದ ನಮ್ಮ ಶಾಸಕರು ಹಾಗೂ ಮಂತ್ರಿಗಳು ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 200 ಕೋಟಿ ವೆಚ್ಚದಲ್ಲಿ ಆಸ್ಪತ್ರೆ, ಕೆಪಿಎಸ್ ಶಾಲೆಗಳು, ಬಳ್ಳಾರಿಯಲ್ಲಿ 100 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಸ್ಥಾಪನೆ, 5267 ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಸಂಕಲ್ಪ ಮಾಡಿದೆ. 65 ಕೋಟಿ ವೆಚ್ಚದಲ್ಲಿ ಉಗ್ರಾಣಗಳ ಸ್ಥಾಪನೆ, 24 ಹೊಸ ಪ್ರಾಥಮಿಕ ಶಾಲೆಗಳು, ಸುಮಾರು ಏಳು ತಾಲೂಕುಗಳಲ್ಲಿ ಹೊಸ ಹೆರಿಗೆ ಆಸ್ಪತ್ರೆ ಆರಂಭಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನೀವು ನಮಗೆ ಶಕ್ತಿ ನೀಡಿ ಅಧಿಕಾರಕ್ಕೆ ತಂದಿದ್ದೀರಿ. ನಿಮ್ಮ ಋಣ ತೀರಿಸಿ ಗೌರವ ಉಳಿಸಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
“ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಮ್ಮ ಸರ್ಕಾರ ನಿಮ್ಮೆಲ್ಲರಿಗೆ ಅನೇಕ ಕಾರ್ಯಕ್ರಮ ರೂಪಿಸಿದೆ. ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಎಲ್ಲಾ ವರ್ಗಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ. ಆರೋಗ್ಯ, ಗ್ರಾಮೀಣ ರಸ್ತೆ, ಬೆಂಗಳೂರು ನಗರ, ಕುಡಿಯುವ ನೀರು, ನೀರಾವರಿ, ಸಮಾಜ ಕಲ್ಯಾಣ ಯೋಜನೆಗೆ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಿ ಅವರ ಪ್ರಗತಿಗೆ ಕಾರಣವಾಗಿದ್ದರೆ ಅದು ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ” ಎಂದು ಹೇಳಿದರು.
ನಾವೆಲ್ಲರೂ ಮನಮೋಹನ್ ಸಿಂಗ್ ಅವರನ್ನು ನೆನೆಯಬೇಕು
“ಮನಮೋಹನ್ ಸಿಂಗ್ ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಸರ್ಕಾರದ ಅವಧಿಯಲ್ಲಿ ಈ ಭಾಗಕ್ಕೆ ಆರ್ಟಿಕಲ್ 371 ಜೆ ಮೂಲಕ ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರು ಈ ದೇಶಕ್ಕೆ ನೀಡಿರುವ ಆರ್ಥಿಕ, ಸಾಮಾಜಿಕ ಶಕ್ತಿ ನಾವು ಮರೆಯಲು ಸಾಧ್ಯವಿಲ್ಲ. ದೇಶದ ಪ್ರಧಾನಮಂತ್ರಿಯಾಗುವ ಅವಕಾಶ ಬಂದಾಗ ಶ್ರೀಮತಿ ಸೋನಾ ಗಾಂಧಿ ಅವರು ನನಗೆ ಈ ಅಧಿಕಾರ ಬೇಡ, ಈ ದೇಶಕ್ಕೆ ಆರ್ಥಿಕ ತಜ್ಞರ ಅವಶ್ಯಕತೆ ಇದ್ದು, ಮನಮೋಹನ್ ಸಿಂಗ್ ಅವರು ಈ ದೇಶ ಮುನ್ನಡೆಸಲಿ ಎಂದರು. ಆಮೂಲಕ ಶೈಕ್ಷಣಿಕ ಹಕ್ಕು, ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಯಿತು. ಹೀಗಾಗಿ ನಾವೆಲ್ಲರೂ ಅವರನ್ನು ಸ್ಮರಿಸಬೇಕು” ಎಂದು ತಿಳಿಸಿದರು..
ಮಲ್ಲಾಬಾದ್ ಏತ ನೀರಾವರಿಗೆ ಶೀಘ್ರವೇ ಶಂಕುಸ್ಥಾಪನೆ
ಮಹಾತ್ಮ ಗಾಂಧಿ ಅವರು ಅಲಂಕರಿಸಿದ ಸ್ಥಾನದಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಕೂತು ನಿಮ್ಮ ಸೇವೆ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶಿನದಲ್ಲಿ ಇಂದು ನಾವೆಲ್ಲರೂ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಈ ಹಿಂದೆ ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿರಲಿಲ್ಲ. ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ರೂಪ ನೀಡಲಿಲ್ಲ. ಅದಕ್ಕಾಗಿ ಹಣ ನೀಡಲಿಲ್ಲ. ಹೀಗಾಗಿ ಈ ಯೋಜನೆಗೆ ನೆರವು ನೀಡಬೇಕು ಎಂದು ಅಜಯ್ ಸಿಂಗ್ ಅವರು ಮನವಿ ಮಾಡಿದ್ದರು. ನಾನು ಮುಂದಿನ ಬಜೆಟ್ ನಲ್ಲಿ ಈ ಯೋಜನೆಗೆ ನೆರವು ನೀಡುವುದಾಗಿ ತಿಳಿಸಿದ್ದೆ. ನಾನು ಹಾಗೂ ಸಿದ್ದರಾಮಯ್ಯ ಅವರು ಸೇರಿ ಈ ಯೋಜನೆಗೆ ಅನುಮತಿ ನೀಡಿದ್ದು ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ನಾನೇ ಬಂದು ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಿದ್ದೇನೆ”
ಮಹಿಳಾ ದಿನದ ಶುಭಾಶಯಗಳು:
“ಇಡೀ ವಿಶ್ವ ನಮ್ಮ ಹೆಣ್ಣುಮಕ್ಕಳು, ತಾಯಂದಿರನ್ನು ಸ್ಮರಿಸುವ ವಿಶೇಷವಾದ ದಿನ. ನಾವೆಲ್ಲರೂ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಇಲ್ಲಿ ಬಂದಿರುವ ಎಲ್ಲಾ ತಾಯಂದಿರಿಗೆ ಮಹಿಳಾ ದಿನದ ಶುಭಾಶಯಗಳನ್ನು ಅರ್ಪಿಸುತ್ತೇನೆ. ನಾವು ಯಾವುದೇ ಊರಿಗೆ ಹೋದರೆ ಅಲ್ಲಿನ ಗ್ರಾಮ ದೇವತೆ ಯಾವುದು ಎಂದು ಕೇಳುತ್ತೇವೆ. ಹೆಣ್ಣಿಗೆ ನಮ್ಮಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ವೆಂಕಟೇಶ್ವರನನ್ನು ನಾವು ಲಕ್ಷ್ಮಿ ವೆಂಕಟೇಶ್ವರ, ಶಿವನನ್ನು ಪಾರ್ವತಿ ಪರಮೇಶ್ವರ, ಗಣಪತಿಯನ್ನು ಗೌರಿ ಗಣೇಶ ಎಂದು ಕರೆಯುತ್ತೇವೆ. ಹೆಣ್ಣಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ನಮ್ಮ ನಾಡಿನ ದೇವತೆಗಳು ಚಾಂಮುಂಡೇಶ್ವರಿ ಹಾಗೂ ತಾಯಿ ಭುವನೇಶ್ವರಿ. ನಮ್ಮ ಸರ್ಕಾರ ಕೂಡ ಮಹಿಳೆಯರ ಮೇಲೆ ಹೆಚ್ಚು ವಿಶ್ವಾಸವಿಟ್ಟು, ನಿಮ್ಮ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಲು ಅನೇಕ ಯೋಜನೆ ರೂಪಿಸಿದ್ದೇವೆ” ಎಂದರು
“ಬಡ ಮಹಿಳೆಯರಿಗೆ ಮಾಸಿಕ 2 ಸಾವಿರ, ಮಹಿಳೆಯರು ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ, 200 ಯೂನಿಟ್ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನಮ್ಮ ಐದು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ನೀಡುತ್ತಿದೆ. ನಿನ್ನೆ ನಮ್ಮ ಸರ್ಕಾರ ಬಜೆಟ್ ಮಂಡಿಸಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಸೇರಿದಂತೆ ಮಹಿಳೆಯರಿಗೆ ಪ್ರೋತ್ಸಾಹದ ಹಣ ಹೆಚ್ಚು ಮಾಡಿದ್ದೇವೆ” ಎಂದು ತಿಳಿಸಿದರು.
BREAKING NEWS: ಮಣಿಪುರದಲ್ಲಿ ಕುಕಿ ಸದಸ್ಯರ ನಡುವೆ ಘರ್ಷಣೆ: ಓರ್ವ ಸಾವು, 27 ಭದ್ರತಾ ಸಿಬ್ಬಂದಿಗೆ ಗಾಯ
ಮೀಸಲಾತಿ ಸೌಲಭ್ಯ ಕೊಟ್ಟಿದ್ದು ನಾವು, ಅದರ ಪ್ರತಿಫಲ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ: HDD ಬೇಸರ