ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಅತ್ಯಂತ ಕಠಿಣ ಹಂತಕ್ಕೆ ಬಂದು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇಂದು (ಏಪ್ರಿಲ್ 7, 2026) ಮಧ್ಯರಾತ್ರಿಯವರೆಗೆ ಗಡುವು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), “ಅಮೆರಿಕ ಏನಾದರೂ ನಮ್ಮ ‘ಲಕ್ಷ್ಮಣ ರೇಖೆ’ (Red Lines) ದಾಟಿದರೆ, ನಮ್ಮ ಪ್ರತಿಕ್ರಿಯೆ ಕೇವಲ ಈ ಭಾಗಕ್ಕೆ ಸೀಮಿತವಾಗಿರುವುದಿಲ್ಲ,” ಎಂದು ಭೀಕರ ಎಚ್ಚರಿಕೆ ನೀಡಿದೆ.
“ಇಂದೇ ಹಾರ್ಮುಜ್ ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ಇಡೀ ನಾಗರಿಕತೆಯೇ ನಾಶವಾಗಲಿದೆ” ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಗುಡುಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಿಗ್ಗೆ 5:30 ರೊಳಗೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ ಇರಾನ್‌ನ ಇಂಧನ ಮತ್ತು ಸಾರಿಗೆ ಮೂಲಸೌಕರ್ಯಗಳನ್ನು ಧ್ವಂಸ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಈ ಬೆದರಿಕೆಗೆ ಮಣಿಯದ ಇರಾನ್, “ನಾವು ಯುದ್ಧಕ್ಕೆ ಸಿದ್ಧ” ಎಂದು ಘೋಷಿಸಿದೆ. ಇರಾನ್ ಅಧ್ಯಕ್ಷರು ಈಗಾಗಲೇ “1.4 ಕೋಟಿ ಇರಾನಿಯನ್ನರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗಿದ್ದಾರೆ” ಎಂದು ಹೇಳಿದ್ದಾರೆ. ಅಲ್ಲದೆ, ಪವರ್ ಪ್ಲಾಂಟ್‌ಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ಅಲ್ಲಿನ ಯುವಕರಿಗೆ ಕರೆ ನೀಡಲಾಗಿದೆ.
ಅಮೆರಿಕವು ಇರಾನ್‌ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ ಅಥವಾ ಇಂಧನ ಕೇಂದ್ರಗಳ ಮೇಲೆ ದಾಳಿ ಮಾಡಿದರೆ, ಇರಾನ್ ತನ್ನ ಕ್ಷಿಪಣಿಗಳನ್ನು ಗಲ್ಫ್ ರಾಷ್ಟ್ರಗಳತ್ತ ಮಾತ್ರವಲ್ಲದೆ, ಅಮೆರಿಕದ ಹಿತಾಸಕ್ತಿಗಳಿರುವ ದೂರದ ಪ್ರದೇಶಗಳಿಗೂ ಗುರಿಯಾಗಿಸುವುದಾಗಿ ಎಚ್ಚರಿಸಿದೆ.








