ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದ್ದರೂ, ರಾಜ್ಯವು ಹೊಸ ಹೆಸರನ್ನು ಮುಂದುವರಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ರಾಜ್ಯ ವಿಚಾರ. ನಮಗೂ ಕಾನೂನು ತಿಳಿದಿದೆ. ಅದನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ನಮಗೆ ತಿಳಿದಿದೆ” ಎಂದರು.
ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಈ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿವೆ. ಹೆಸರು ಬದಲಾಯಿಸದಂತೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಕೆಲವು ಸಚಿವರು ಇಲ್ಲಿದ್ದಾರೆ.
ಅದು ಕುಮಾರಸ್ವಾಮಿಯೇ ಎಂದು ಕೇಳಿದಾಗ, “ಬೇರೆ ಯಾರು?” ಎಂದು ಅವರು ಹೇಳಿದರು.
ಇದು ಕುಮಾರಸ್ವಾಮಿ ಅವರ ದ್ವೇಷ ರಾಜಕಾರಣವಲ್ಲದೆ ಬೇರೇನೂ ಅಲ್ಲ ಎಂದು ಪ್ರತಿಪಾದಿಸಿದ ಡಿಸಿಎಂ, “ನೀವು ನಿಮ್ಮ ಹೆಸರನ್ನು ಬದಲಾಯಿಸಿದಾಗ, ನೀವು ಅಫಿಡವಿಟ್ ಸಲ್ಲಿಸುವ ಮೂಲಕ ಅದನ್ನು ಬದಲಾಯಿಸಬಹುದು. ಇದು ರಾಜ್ಯದ ವಿಷಯ. ರಾಜ್ಯದಲ್ಲಿ ದ್ವೇಷ ರಾಜಕಾರಣ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.