ವಾಷಿಂಗ್ಟನ್:ಇರಾನ್ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಎಂಬ ವಿಷಯಕ್ಕೆ ಒಪ್ಪಿಗೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ದಶಕಗಳಿಂದ ನೆಲೆಸಿದ್ದ ಪರಮಾಣು ಸಂಘರ್ಷದ ಆತಂಕಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
“ನಾವು ಅಲ್ಲಿ (ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ) ಏನೆಲ್ಲಾ ನಿರ್ಮೂಲನೆ ಮಾಡಬೇಕಿತ್ತೋ ಅವೆಲ್ಲವನ್ನೂ ಮಾಡಿದ್ದೇವೆ. ಈಗ ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದದಿರಲು ಸಮ್ಮತಿಸಿದೆ,” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಇದ್ದ ಸಂಕೀರ್ಣ ಒಪ್ಪಂದಗಳಿಗಿಂತಲೂ ಕಠಿಣವಾದ ನಿಲುವು ತಳೆದಿದ್ದ ಟ್ರಂಪ್ ಸರ್ಕಾರ, ಈಗ ಇರಾನ್ ಅನ್ನು ಶಸ್ತ್ರಾಸ್ತ್ರ ರಹಿತವಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ.
ಇರಾನ್ ತನ್ನ ಪರಮಾಣು ಆಕಾಂಕ್ಷೆಗಳನ್ನು ಕೈಬಿಟ್ಟಿರುವುದು ಜಾಗತಿಕ ಶಾಂತಿ ಮತ್ತು ವಿಶೇಷವಾಗಿ ಅಮೆರಿಕದ ಮಿತ್ರ ರಾಷ್ಟ್ರಗಳ ಭದ್ರತೆಗೆ ಪೂರಕವಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಇರಾನ್ ರಹಸ್ಯವಾಗಿ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂಬ ಆರೋಪದ ಮೇಲೆ ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಆ ದೇಶದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದವು. ಇದರಿಂದಾಗಿ ಇರಾನ್ನ ತೈಲ ರಫ್ತು ಮತ್ತು ಆರ್ಥಿಕತೆ ಕುಸಿದಿತ್ತು. ಈಗಿನ ಈ ಒಪ್ಪಂದ ಅಥವಾ ಸಹಮತವು ಇರಾನ್ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲು ದಾರಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.








