ನವದೆಹಲಿ: “ಚುನಾವಣಾ ಆಯೋಗ ನಾವು ಎತ್ತುತ್ತಿರುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಹಾಗೂ ಪರಿಸ್ಥಿತಿ ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ನಾವು ಆಯೋಗದ ವಿರುದ್ಧ ಹೋರಾಡಬೇಕಾಗುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಮತಗಳ್ಳತನ ವಿಚಾರವಾಗಿ ರಾಹುಲ್ ಗಾಂಧಿ ಅವರ ಹೇಳಿಕೆಯ ಬಗ್ಗೆ ಸುದ್ದಿಸಂಸ್ಥೆ ಜತೆ ನವದೆಹಲಿಯಲ್ಲಿ ಶುಕ್ರವಾರ ಅವರು ಮಾತನಾಡಿದರು.
“ಮತಗಳ್ಳತನ ವಿಚಾರವಾಗಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರು ಈ ಬಗ್ಗೆ ದೊಡ್ಡ ಸಂಶೋಧನೆ ಮಾಡಿದ್ದಾರೆ.” ಈ ವಿಚಾರವಾಗಿ ನಾವು ಇನ್ನೂ ಹೆಚ್ಚಿನ ದಾಖಲೆಗಳನ್ನು ಒದಗಿಸುತ್ತೇವೆ. ರಾಹುಲ್ ಗಾಂಧಿ ಅವರ ಧ್ವನಿಗೆ ನಾವೂ ಧ್ವನಿ ಸೇರಿಸುತ್ತೇವೆ” ಎಂದು ತಿಳಿಸಿದರು.
“ಬೆಂಗಳೂರಿನಲ್ಲಿ ನಾನು ಸಹ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣ ಪರಿಶೀಲಿಸಿದ್ದೇನೆ. ಒಂದು ಬೂತ್‌ನಿಂದ ಇನ್ನೊಂದು ಬೂತ್‌ಗೆ ಭಾರೀ ಪ್ರಮಾಣದಲ್ಲಿ ಮತಗಳ ವ್ಯತ್ಯಾಸ ಹಲವಾರು ಕ್ಷೇತ್ರಗಳಲ್ಲಿ ಕಂಡು ಬಂದಿದೆ. ಕ್ರಮಬದ್ದವಾಗಿ ಮತಗಟ್ಟೆಗಳಲ್ಲಿ ಹೆಸರುಗಳನ್ನು ಸೇರಿಸಿಲ್ಲ, ಅಕ್ರಮವಾಗಿ ಸೇರಿಸಲಾಗಿದೆ” ಎಂದರು.
“ಮಹದೇವಪುರ ಭಾಗದಲ್ಲಿ ನಾವು ಅಧ್ಯಯನ ನಡೆಸಿದ ಪ್ರಕಾರ ಸಾಕಷ್ಟು ಮತಗಳ ವ್ಯತ್ಯಾಸ ಕಂಡು ಬಂದಿದೆ. ನಮ್ಮ ಕಾನೂನು ತಂಡದ ಸುಮಾರು 20 ಸದಸ್ಯರು ಇದರಲ್ಲಿ ಕೆಲಸ ಮಾಡಿದ್ದಾರೆ” ಎಂದರು.
ಕಾಂಗ್ರೆಸ್ ಪಕ್ಷ ಇದರಿಂದ ಸಾಕಷ್ಟು ಕ್ಷೇತ್ರಗಳನ್ನು ಕಳೆದುಕೊಂಡಿದೆಯೇ ಎಂದು ಕೇಳಿದಾಗ, “ಇದು ಕೇವಲ ಸೋಲು-ಗೆಲುವಿನ ಪ್ರಶ್ನೆಯಲ್ಲ. ಬದಲಾಗಿ ಪಾರದರ್ಶಕತೆ ಮತ್ತು ನಂಬಿಕೆಯ ಚುನಾವಣಾ ವ್ಯವಸ್ಥೆಯ ಬಗೆಗಿನ ಪ್ರಶ್ನೆಯಾಗಿದೆ. ಯಾವುದೇ ಪಕ್ಷ ಸದಾ ಗೆಲ್ಲುತ್ತಲೇ ಇರುವುದಿಲ್ಲ” ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿಯೂ ಇದೇ ರೀತಿಯ ಮತಗಳ್ಳತನ ನಡೆದಿದೆಯೇ ಎಂದು ಕೇಳಿದಾಗ, “ಹೌದು, ಈ ಕ್ಷೇತದಲ್ಲಿಯೂ ಅಕ್ರಮ ನಡೆದಿದೆ. ಸೋಲಿನ ಅಂತರ ಸುಮಾರು 7-8 ಸಾವಿರ ಬರಬಹುದು ಎಂದುಕೊಂಡಿದ್ದೆವು. ಆದರೆ 1 ಲಕ್ಷ ಮೀರಿತು. ನಾವು ಮತದಾರರ ಪಟ್ಟಿಯನ್ನು ಗಮನಿಸಿದೆವು. ಆಗ ಸಾಕಷ್ಟು ಪೂರ್ವಯೋಜನೆ ನಡೆದಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಮಹದೇವಪುರ ಕ್ಷೇತ್ರವೊಂದರಲ್ಲಿಯೇ 60 ಸಾವಿರ ಮತಗಳಿಗೆ ಸರಿಯಾದ ದಾಖಲೆಗಳೇ ಇಲ್ಲ. ಇದರ ಬಗ್ಗೆ ಅಧಿಕೃತ ದಾಖಲೆಗಳನ್ನು ಇಟ್ಟುಕೊಂಡು ಸದನದಲ್ಲಿ ಮಾತನಾಡುತ್ತೇವೆ” ಎಂದು ಹೇಳಿದರು.
ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ‘ಪೊಲೀಸ್ ಇಲಾಖೆ’ ಸಹಿಸುವುದಿಲ್ಲ: ಸಾಗರ ಡಿವೈಎಸ್ಪಿ ಎಚ್ಚರಿಕೆ