ಬೆಂಗಳೂರು : ರಾಜ್ಯದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರು ಕಲುಷಿತಗೊಳ್ಳುವ ಹಾಗೂ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಯಿರುವುದರಿಂದ ಮುಂಜಾಗರೂಕತ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಬೇಕೆಂದು ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
ಸಿಎಒಗಳೊಂದಿಗೆ ನಡೆದ ವಿಡಿಯೊ ಸಭೆಯಲ್ಲಿ ಮಾತನಾಡಿದ ಸಚಿವರು ರಾಜ್ಯದ 18ರಿಂದ 20 ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ, ಈ ಕಾರಣದಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ, ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಜಲಮೂಲಗಳ ಸುತ್ತ ಮುತ್ತ ಶುಚಿತ್ವ ಕಾಪಾಡುವುದು, ನೀರು ಸರಬರಾಜು ಕೊಳವೆಗಳಲ್ಲಿ ಸೋರಿಕೆಯಿಲ್ಲದಂತೆ ಎಚ್ಚರವಹಿಸುವುದು, ಕೊಳವೆಗಳು ಹಾದು ಹೋಗುವ ಮಾರ್ಗಗಳ ಪರಿಶೀಲನೆ ಸೇರಿದಂತೆ ತೀವ್ರ ನಿಗಾ ಇಡಲು ಸಚಿವರು ಸೂಚಿಸಿದರಲ್ಲದೆ, ನೀರಿನ ಮಾದರಿಗಳನ್ನು ಪರೀಕ್ಷಿಸಿಯೇ ನೀರು ಸರಬರಾಜು ಮಾಡಬೇಕೆಂದು ಹೇಳಿದರು.
ಸತತ ಮಳೆಯಿಂದಾಗಿ ಗ್ರಾಮಗಳಲ್ಲಿ ಸಾಂಕ್ರಾಮಿರೋಗಗಳು ಹಬ್ಬದಂತೆ ಜಾಗ್ರತೆ ವಹಸಿಲು ಸಚಿವರು ಸೂಚಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕೆಂದು ಸಲಹೆ ನೀಡಿದರು