ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಪಾಲಕರಿಗೆ ಗೊತ್ತಾಗದಂತೆ ಮನೆಯಿಂದ ಹೊರಗೆ ಹೋಗುತ್ತಿರುವುದರಿಂದ ಪೋಷಕರು ಆತಂಕವಾಗುತ್ತಿರುವುದಲ್ಲದೇ, ಸಮಾಜದ ಸ್ವಾಸ್ತ್ಯ ಹಾಳಾಗುವುದಕ್ಕೂ ಪ್ರಮುಖ ಕಾರಣವಾಗುತ್ತಿದೆ. ಆದ್ದರಿಂದ ಬಸ್ಸುಗಳಲ್ಲಿ ಪಾಲಕರ ರಹಿತ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಲ್ಲಿ, ಮಕ್ಕಳ ಸಹಾಯವಾಣಿಗೆ ತಿಳಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಸಾರಿಗೆ ಇಲಾಖೆ ಸೂಚಿಸಿದೆ.
ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತುಪಡಿಸಿ ಬಸ್ಸುಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಲ್ಲಿ ಅವರ ಮೇಲೆ ನಿಗಾ ಇರಿಸಬೇಕು. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದಲ್ಲಿ ಅಥವಾ ಅನುಮಾನಸ್ಪದವಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಲ್ಲಿ ಅಂತಹ ಮಕ್ಕಳನ್ನ ಗುರುತಿಸಿ ಅವರ ಬಳಿ ಮಾತನಾಡಿ ಪೋಷಕರ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಮಕ್ಕಳು ಗೊಂದಲದ ಉತ್ತರವನ್ನ ನೀಡಿದ್ದಲ್ಲಿ, ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಅಂತಹ ಮಕ್ಕಳನ್ನು ಕರೆದೊಯ್ಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.