ಬಳ್ಳಾರಿ:ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವಂತಹ ಎಲ್ಲಾ ರೀತಿಯ ಸೇವೆಗಳನ್ನು ಆನ್‍ಲೈನ್‍ನಲ್ಲಿ ಪಡೆಯಬಹುದು. ಗ್ರಾಮ ಪಂಚಾಯಿತಿ ಸೇವೆಗಳಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಎಲ್ಲಾ ಕುಂದುಕೊರತೆಗಳನ್ನು ದಾಖಲಿಸಿ ಮೊಬೈಲ್‍ನಲ್ಲಿ ವಾಟ್ಸಾಪ್ ಚಾಟ್ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿದ್ಧಪಡಿಸಿರುವ ಮಹತ್ವದ ‘ಪಂಚಮಿತ್ರ’ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೊಬೈಲ್‍ನಲ್ಲಿ ನಂಬರ್ ಅನ್ನು ಸೇವ್ ಮಾಡಿಕೊಂಡು ಚಾಟ್ ಅನ್ನು ಆರಂಭಿಸಿದರೆ ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಎಲ್ಲಾ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ಆಯ್ಕೆಗಳು ಆರಂಭವಾಗುತ್ತವೆ. ಕ್ರಮ ಸಂಖ್ಯೆಯನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆಯನ್ನು ಮಾಡಿಕೊಂಡು ನಂತರ ಗ್ರಾಮ ಪಂಚಾಯಿತಿಯ ಆಯ್ಕೆ ಮಾಡಿಯನ್ನು ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು ಎಂದರು.
ಸಾರ್ವಜನಿಕರು ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಕಟ್ಟಡ ನಿರ್ಮಾಣದ ಲೈಸೆನ್ಸ್, ನೀರು ಸರಬರಾಜು ಸಂಪರ್ಕ, ವ್ಯಾಪಾರ ಪರವಾನಿಗೆ ಸೇರಿದಂತೆ ಎಲ್ಲಾ ಇತರ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಬಹುದು ಎಂದು ತಿಳಿಸಿದರು.
ನರೇಗಾ ಯೋಜನೆ, ತ್ಯಾಜ್ಯ ನಿರ್ವಹಣೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ 78 ವರ್ಗಗಳ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆಯಲು ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಪರವಾನಿಗೆ, ನಿರಾಕ್ಷೇಪಣಾ ಪತ್ರ, ಜಾಬ್ ಕಾರ್ಡ್ ವಿತರಣೆ ಇನ್ನು ಹಲವು ಸೇವೆಗೆ ಅರ್ಜಿ ಸಲ್ಲಿಸಬಹುದು ಎಂದರು.
*ವಾಟ್ಸ್‍ಆಪ್ ಚಾಟ್‍ಗೆ ಸಂಪರ್ಕ ಸಂಖ್ಯೆ 8277506000:*
ಈ ಪಂಚಮಿತ್ರ ಡಿಜಿಟಲ್ ಸೇವೆ ಪಡೆಯಲು ಸ್ಮಾರ್ಟಫೆÇೀನ್ ಅಗತ್ಯವಿದೆ. ಈ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಸಾರ್ವಜನಿಕರು ಚಾಟ್ ಮಾಡಬಹುದು.
ಮೊದಲಿಗೆ ಹಾಯ್ ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಅಗತ್ಯ ಸೇವೆಯನ್ನು ಪಡೆಯಬಹುದು.
ಪಂಚಮಿತ್ರ ಪೋರ್ಟಲ್ ವಾಟ್ಸ್‍ಆಪ್ ಚಾಟ್‍ನಲ್ಲಿ ಲಭ್ಯವಿರುವ ಸೇವೆ ಮುಖ್ಯವಾಗಿ ಪಂಚಮಿತ್ರದಲ್ಲಿ ಗ್ರಾಮ ಪಂಚಾಯತ ಚುನಾಯಿತ ಜನಪ್ರತಿನಿಧಿಗಳ ವಿವರ, ಸಿಬ್ಬಂದಿಗಳ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯತಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು ಸ್ವ ಸಹಾಯ ಗುಂಪಿನ ವಿವರಗಳು, 4 (1) (ಎ) ಮತ್ತು 4 (1) (ಬಿ) ಆರ್.ಟಿ.ಐ ದಾಖಲೆಗಳು, ಕಟ್ಟಡ ನಿರ್ಮಾಣ ಪರವಾನಗಿ, ಹೊಸ ನೀರು ಪೂರೈಕೆ ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಉದ್ದಿಮೆಯ ಪರವಾನಗೆ, ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆತಕ್ಕೆ ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು, ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ಇದರೊಂದಿಗೆ ನಮೂನೆ 9/11ಎ, ನಮೂನೆ 11ಬಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತು ಮಾಹಿತಿಗಳನ್ನು ಪಡೆಯಬಹುದು.
ಗ್ರಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ, ರಸ್ತೆ ಸಮಸ್ಯೆ, ಸೇತುವೆ ದುರಸ್ತಿ, ಮನರೇಗಾ ಯೋಜನೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಪಟ್ಟ 39 ರೀತಿಯ ಕುಂದುಕೊರತೆ ಗುರುತಿಸಲಾಗಿದೆ. ಈ ಸಮಸ್ಯೆಗಳ ಕುರಿತಂತೆ ಪೆÇೀರ್ಟಲ್ ಅಥವಾ ವಾಟ್ಸ್‍ಆಪ್ ಮೂಲಕ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶ ಇರುವುದು ವಿಶೇಷವಾಗಿದೆ.
ವಾಟ್ಸ್‍ಆಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ. ವಾಟ್ಸ್‍ಆಪ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಈ ಕೆಳಗಿನ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದುಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಭಾರತ್ ನಿರ್ಮಾಣ ಸೇವಾ ಕೇಂದ್ರ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗಿರಿಜಾ ಶಂಕರ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.