ಬೆಂಗಳೂರು : ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು – ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ:
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ (Advisory and Do’s and Don’ts on Thunderstorm & Lightning)ಸಲಹೆ/ಸೂಚನೆಗಳ ಬಗ್ಗೆ ವಿವರಿಸಿರುತ್ತದೆ.
ಗುಡುಗು ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಸಲಹೆ ಸೂಚನೆಗಳು
1. ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ Common Alerting Protocol (CAP) ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ Alerts / ಸಂದೇಶಗಳನ್ನು ಗಮನಿಸುವುದು.
2. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು.
3. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಾದ ಮನೆಗಳು, ಕಛೇರಿಗಳು, ಅಂಗಡಿಗಳು ಮತ್ತು ಕಿಟಕಿ ಮುಚ್ಚಿರುವಂತಹ ವಾಹನಗಳಲ್ಲಿ ಆಶ್ರಯ ಪಡೆಯುವುದು.
4. ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿಕೊಂಡು ಆಶ್ರಯ ಪಡೆಯುವುದು.
5. ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು.
6. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು, ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.
7. ಗುಡುಗು – ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡುವುದು ಹಾಗೂ ಮನೆಗಳಲ್ಲಿ ಇರುವುದು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು ಹಾಗೂ ವಾಹನ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರುವುದು ಹಾಗೂ ಮರಗಳು ಮತ್ತು ವಿದ್ಯುತ್ ಲೈನ್‌ಗಳಿಂದ ದೂರ ವಾಹನ ನಿಲುಗಡೆ ಮಾಡುವುದು.
8. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.
9. ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು,
10. ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು.
11. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ/ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯುವುದು.
12. ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರುವುದು.
13. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಬಾರದು ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು.
14. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು.
15. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರುವುದು.
16. ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು.
17. ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರ ಯಾವುದೇ ಅವಶೇಷಗಳನ್ನು ತೆಗೆದುಹಾಕುವುದು.
18. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು.
19. ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡದಿರುವುದು.
20. ಆಟದ ಮೈದಾನ, ಉದ್ಯಾನವನಗಳು ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸುವುದು.
21. ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.
22. ಅರಣ್ಯ ಪ್ರದೇಶದಿಂದ ಗಿಡ ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು ಮಿಂಚಿನ ಒಡತದಿಂದಾಗಿ ಕಾಡ್ತಿಚ್ಯು ಸಂಭವಿಸುವ ಸಾಧ್ಯತೆಯಿದೆ.
23. ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗುವುದು.
24. ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರುವುದು.
25. ವಿದ್ಯುತ್ ಸಂಪರ್ಕ ಹೊಂದಿರುವಂತಹ ವಿದ್ಯುತ್ /ಎಲೆಕ್ನಿಕಲ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್‌ಟಾಪ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೋನ್, ವಾಷಿಂಗ್ ಮಷಿನ್, ಸೈನ್ ಹಾಗೂ ಇತರೆ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದು.
26. ಬಾಗಿಲುಗಳು, ಕಿಟಕಿಗಳು, ಮಂಟಪಗಳು, ಕಾಂಕ್ರಿಟ್ ನೆಲ, ಬೆಂಕಿಯ ಸ್ಥಳಗಳು, ಸ್ಟವ್‌ಗಳು, ಬಾತ್‌ಬ್‌ಗಳು ಅಥವಾ ಇತರೆ ವಿದ್ಯುತ್ ಉಪಕರಣಗಳಿಂದ ದೂರವಿರುವುದು.