ನವದೆಹಲಿ: ಇರಾನ್ನ ಮಶ್ಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ, ಭಾರತಕ್ಕೆ ತೆರಳಬೇಕಿದ್ದ ಮಾನವೀಯ ನೆರವು ಹೊತ್ತ ವಿಮಾನದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಈ ಕೃತ್ಯವನ್ನು ‘ಯುದ್ಧಾಪರಾಧ’ (War Crime) ಎಂದು ಕರೆದಿರುವ ಇರಾನ್, ಇದು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಕಿಡಿಕಾರಿದೆ.
ಇರಾನ್ನ ‘ಮಹಾನ್ ಏರ್’ (Mahan Air) ಸಂಸ್ಥೆಗೆ ಸೇರಿದ ಈ ವಿಮಾನವು ನವದೆಹಲಿಗೆ ಬರಲು ಸಜ್ಜಾಗಿತ್ತು. ಭಾರತದಿಂದ ಇರಾನ್ಗೆ ಅಗತ್ಯವಾದ ಮದ್ದು-ಮಾತ್ರೆಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಮಾನವೀಯ ಮಿಷನ್ನ ಭಾಗವಾಗಿ ಈ ವಿಮಾನ ಕಾರ್ಯನಿರ್ವಹಿಸುತ್ತಿತ್ತು.ಮಶ್ಹದ್ ವಿಮಾನ ನಿಲ್ದಾಣದ ಮೇಲೆ ನಡೆದ ಅಮೆರಿಕದ ದಾಳಿಯಿಂದಾಗಿ ವಿಮಾನವು ಜಖಂಗೊಂಡಿದ್ದು, ಮಾನವೀಯ ನೆರವು ವಿತರಣಾ ಪ್ರಕ್ರಿಯೆಗೆ ಭಾರಿ ಅಡಚಣೆಯಾಗಿದೆ. ಸಾವು-ನೋವುಗಳ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ.
ಇರಾನ್ ಆಕ್ರೋಶ: “ಮಾನವೀಯ ನೆರವು ನೀಡುವ ನಾಗರಿಕ ವಿಮಾನವನ್ನು ಗುರಿಯಾಗಿಸುವುದು ಅಂತರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಜಿನೀವಾ ಒಪ್ಪಂದದ ಆರ್ಟಿಕಲ್ 52 ರ ಅಡಿ ಯುದ್ಧಾಪರಾಧವಾಗಿದೆ,” ಎಂದು ಇರಾನ್ನ ನಾಗರಿಕ ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗಷ್ಟೇ ಭಾರತವು ಇರಾನ್ಗೆ ಮಾನವೀಯ ನೆಲೆಯಲ್ಲಿ ನೆರವು ಕಳುಹಿಸಿತ್ತು. ಈಗ ದಾಳಿಗೆ ಒಳಗಾದ ವಿಮಾನವು ಅದೇ ಸಹಕಾರದ ಮುಂದುವರಿದ ಭಾಗವಾಗಿ ಔಷಧಗಳನ್ನು ಸಂಗ್ರಹಿಸಲು ಭಾರತಕ್ಕೆ ಬರಬೇಕಿತ್ತು ಎಂದು ಮೂಲಗಳು ತಿಳಿಸಿವೆ.






