ಬೆಂಗಳೂರು: ರಾಜ್ಯದಲ್ಲಿ ಮಠ, ಮಂದಿರಗಳು, ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದರ ವಿರುದ್ಧ ಬಿಜೆಪಿ ಜನಾಂದೋಲನ ರೂಪಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 1974ರ ವಕ್ಫ್ ಆಸ್ತಿ ಕುರಿತ ಗಜೆಟ್ ಅಧಿಸೂಚನೆ ಹಿಂಪಡೆಯಲು ಆಗ್ರಹಿಸಿ ಮತ್ತು ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ನಾಳೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಿಸಿದರು.
ಕರ್ನಾಟಕದ ವಕ್ಫ್ ನಲ್ಲಿ ನಡೆದಿರುವ ಖೊಟ್ಟಿ (ನಕಲಿ) ದಾಖಲೆಗಳ ಸೃಷ್ಟಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಇ.ಡಿ. (ಜಾರಿ ನಿರ್ದೇಶನಾಲಯ) ತನಿಖೆಯಾಗಬೇಕು. 50 ವರ್ಷದ ಹಿಂದಿನ ಗೆಜೆಟ್ ನೆಪ ಒಡ್ಡಿ 50 ವರ್ಷ ಯಾವುದೇ ಕ್ರಮ ಕೈಗೊಳ್ಳದೇ, ಈಗ ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ, ಕರ್ನಾಟಕ ವಕ್ಫ್ ಬೋರ್ಡ್ ಮೂಲಕ ಮಾಡಿರುವ ಬೃಹತ್ ದಾಖಲೆಗಳ ಸೃಷ್ಟಿಯ ಎಲ್ಲಾ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಇಂದು ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳು ಎಲ್ಲರೂ ಸೇರಿದಂತೆ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ ಎಂದು ಟೀಕಿಸಿದರು.
ರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಆಸ್ತಿ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ. ಈ ಸಂಬಂಧ ಕೇವಲ ನೋಟಿಸ್ ಹಿಂಪಡೆದರೆ ಸಾಲದು. ರೈತರ ಆಸ್ತಿಗಳಲ್ಲಿ ರೈತರ ಹೆಸರನ್ನು ನಮೂದಿಸಬೇಕು. ಅಲ್ಲದೆ, 1974ರ ವಕ್ಫ್ ಆಸ್ತಿ ಕುರಿತ ಗಜೆಟ್ ಅಧಿಸೂಚನೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ. ಕೆ. ರಾಮಮೂರ್ತಿ, ಪಕ್ಷದ ಪ್ರಮುಖರು ಇದ್ದರು.
ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಿರಿ: ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೂಚನೆ
ನಾನು ಯಾವುದೇ ಭೇದಭಾವ ಇಲ್ಲದೇ ಅಭಿವೃದ್ಧಿ ಮಾಡಿದ್ದೇನೆ: ಬಸವರಾಜ ಬೊಮ್ಮಾಯಿ