ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ನುಂಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹೌದು, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ 62 ವರ್ಷದ ಈರೇಗೌಡ 10 ಮುದ್ದೆಗಳನ್ನು (2 ಕೆ.ಜಿ. 716 ಗ್ರಾಂ) ನುಂಗಿ ಪ್ರಥಮ ಸ್ಥಾನ ಪಡೆದರು. ದಿಲೀಪ್ ಎಂಬುವವರು 6 ಮುದ್ದೆ (1 ಕೆಜಿ 682 ಗ್ರಾಂ) ತಿಂದು ದ್ವಿತೀಯ ಸ್ಥಾನ ಪಡೆದರೆ, ರವೀಂದ್ರ ಎಂಬವರು 5.5 ಮುದ್ದೆ ತಿಂದು (1 ಕೆಜಿ 544 ಗ್ರಾಂ) ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನಿಗದಿ ಪಡಿಸಲಾಗಿತ್ತು. ಈ ವೇಳೆಯಲ್ಲಿ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೆಯೋ ಅವರೇ ವಿಜಯಶಾಲಿ ಎಂದಾಗಿತ್ತು. ಇನ್ನು ಸ್ಪರ್ಧಿಗೆ ನೀಡುವ ಪ್ರತಿ ಮುದ್ದೆಯನ್ನೂ ತೂಕ ಹಾಕಿ ಬಡಿಸಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಸ್ಪರ್ಧೆ ಮಾಡಿದ್ದರು.