ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಮೊದಲನೇ ದಿನವಾದ ಇಂದು Noise Pollution (Regulation and Control) Rules, 2000 ಉಲ್ಲಂಘನೆಯ ಕುರಿತು ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅರಣ್ಯ,ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಇಲಾಖೆಯಿಂದ ಉತ್ತರ ವಿಳಂಬವಾಗಿರುವುದಕ್ಕೆ ಅವರು ಅಧಿವೇಶನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಮಸೀದಿಗಳಲ್ಲಿ ಅಝಾನ್ ವೇಳೆ ಲೌಡ್‌ಸ್ಪೀಕರ್‌ಗಳ ಶಬ್ದಮಟ್ಟ ಡೆಸಿಬೆಲ್ ಮಿತಿಯನ್ನು ಮೀರುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಈ ಮಹತ್ವದ ಸಾರ್ವಜನಿಕ ಪರಿಸರ ಸಂಬಂಧಿತ ವಿಷಯದಲ್ಲಿ ಗಂಭೀರತೆ ತೋರದೆ ಪ್ರಶ್ನೆಯನ್ನು ಮುಂದೂಡುತ್ತಿರುವುದು ನಿರ್ಲಕ್ಷ್ಯ ಎಂದಿದ್ದಾರೆ.
ಡಿ.ಎಸ್.ಅರುಣ್ ಅವರು ಧಾರ್ಮಿಕ ಸ್ಥಳಗಳ ಶಬ್ದಮಟ್ಟ ಉಲ್ಲಂಘನೆಗಳ ಜಿಲ್ಲಾವಾರು ಮಾಹಿತಿ, KSPCB ನಡೆಸಿದ ಪರಿಶೀಲನೆಗಳು, Noise Level Testing ವರದಿ, ಪರವಾನಗಿ ಪರಿಶೀಲನೆ ಹಾಗೂ ಮಿತಿಮೀರಿದ ಶಬ್ದ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸ್ಪಷ್ಟ ಉತ್ತರ ಕೇಳಿದ್ದರು.
ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿರುವುದರಿಂದ ಪ್ರಶ್ನೆಗೆ ಸರ್ಕಾರ ಉತ್ತರಿಸಲು ತಡ ಮಾಡುವುದು ಅಸಮಂಜಸ. ಕಾನೂನು ಎಲ್ಲರಿಗೂ ಒಂದೇ, ಇದಕ್ಕೆ ಯಾವುದೇ ವಿನಾಯಿತಿ ಸಾಧ್ಯವಿಲ್ಲ, ಎಂದು ಅಧಿವೇಶನದಲ್ಲಿ ಸರ್ಕಾರದಿಂದ ಉತ್ತರಕ್ಕೆ ಕಠಿಣವಾಗಿ ಒತ್ತಾಯಿಸಿದರು.
ಶಿವಮೊಗ್ಗ ಸೇರಿದಂತೆ ರಾಜ್ಯದ ಜನರ ಹಕ್ಕಿನ ಪ್ರಶ್ನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶೀಘ್ರದಲ್ಲಿ ಸರ್ಕಾರ ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕೆಂದು ಡಿ.ಎಸ್.ಅರುಣ್ ರವರು ಒತ್ತಾಯಿಸಿದರು.








