ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಯಶಸ್ವಿ ಮಾದರಿ ಶಾಲೆಗಳ ಉತ್ತಮ ಸಾಧನೆಗಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಪ್ಲಾನಿಂಗ್ ಅಂಡ್ ಅಡ್ಮಿನಿಸ್ಟ್ರೇಷನ್ (NIEPA) ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ‘ಯಶಸ್ವಿ ಶಾಲಾ ನಾಯಕತ್ವ ರಾಷ್ಟ್ರೀಯ ಸಮಾವೇಶ’ಕ್ಕೆ ಮಾದರಿ ಶಾಲೆಯ ಅತ್ಯುತ್ತಮ ಅಭ್ಯಾಸಗಳ ಅಡಿ ಆಯ್ಕೆಯಾಗಿದ್ದು, ಸಮಾವೇಶದಲ್ಲಿ ಶಾಲೆಯ ಯಶೋಗಾಥೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.
ವಿಕಸಿತ ಭಾರತ-2047 ಸೃಜನಶೀಲ ಹಾದಿಗೆ ಪೂರಕವಾಗಿ NIEPA ಯಿಂದ ಆಯೋಜನೆಗೊಳ್ಳುವ ‘ಯಶಸ್ವಿ ಶಾಲಾ ನಾಯಕತ್ವ’ ರಾಷ್ಟ್ರೀಯ ಸಮಾವೇಶಕ್ಕಾಗಿ ದೇಶದಾದ್ಯಂತ 300ಕ್ಕೂ ಹೆಚ್ಚು ಶಾಲೆಗಳಿಂದ ನಾಮನಿರ್ದೇಶನಗೊಂಡಿದ್ದು, ಇದರಲ್ಲಿ 55 ಮಾದರಿ ಶಾಲೆಗಳನ್ನು ಆಯ್ಕೆ ಮಾಡಿದ್ದು ರಾಜ್ಯದಿಂದ 2 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಸರ್ಕಾರಿ ಪ್ರೌಢಶಾಲೆ ಹೂದಲಮನೆ, ಸಿದ್ದಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗರವಳ್ಳಿ, ಚಿಕ್ಕಮಗಳೂರು ಆಯ್ಕೆಗೊಂಡಿವೆ.

ಶಾಲೆಯ ಮುಖ್ಯೋಪಾಧ್ಯಾಯರು ಈ ಸಮಾವೇಶದಲ್ಲಿ ಭಾಗವಹಿಸಿ ಶಾಲೆಯ ಯಶೋಗಾಥೆಯನ್ನು ಕುರಿತು 15 ನಿಮಿಷಗಳ ಕಾಲ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.75 ವರ್ಷಗಳ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಂಗರವಳ್ಳಿಯು, 1951ರಲ್ಲಿ ಕೂಲಿಮಠ ಹೆಸರಿನಲ್ಲಿ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೇಗುಲವಾಗಿತ್ತು. ಹಂಗರವಳ್ಳಿಯ ಸುತ್ತ-ಮುತ್ತಲಿನ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು, ಕ್ರಮೇಣ ಖಾಸಗಿ ಕಾನ್ವೆಂಟ್ ಶಾಲೆಗಳ ಹೊಡೆತಕ್ಕೆ ಸಿಲುಕಿ 2018ರ ವೇಳೆಗೆ ಕೇವಲ 13 ಮಕ್ಕಳ ದಾಖಲಾತಿಯೊಂದಿಗೆ ಮುಚ್ಚುವ ಹಂತ ತಲುಪಿತ್ತು.
ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆಯನ್ನು ಉಳಿಸಲು ಪಣತೊಟ್ಟು, ‘ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್’ ಸ್ಥಾಪಿಸಿ ಸರ್ಕಾರಿ ಶಾಲೆಯಲ್ಲಿಯೇ ಸರ್ಕಾರದ ಅನುಮತಿಯೊಂದಿಗೆ ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಣ ಆರಂಭಿಸಿ ಕ್ರಮೇಣ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಯಿತು. ಸಂದರ್ಶನದ ಮೂಲಕ ಖಾಸಗಿ ಶಿಕ್ಷಕರನ್ನು ಈ ಶಾಲೆಗೆ ನೇಮಿಸಿ ಟ್ರಸ್ಟ್ ಮೂಲಕ ವೇತನ ನೀಡಲಾಯಿತು. ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ದಾನಿಗಳ ನೆರವಿನಿಂದ 2 ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರ ನೀಡುವ ಸಮವಸ್ತ್ರ ದ ಜೊತೆಗೆ ಹೆಚ್ಚುವರಿಯಾಗಿ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಟ್ರಸ್ಟ್ ಮೂಲಕ ನೀಡಲಾಗುತ್ತಿದೆ.

ಅಳಿವಿನಂಚಿನಲ್ಲಿದ್ದ ಶಾಲೆ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡು ಪ್ರಸಕ್ತ ವರ್ಷ 265 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಹಳೆಯ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದುದನ್ನು ಮನಗಂಡ ಗ್ರಾಮಸ್ಥರು, ಟ್ರಸ್ಟ್‌ನ ಪದಾಧಿಕಾರಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ರೂ.4 ಕೋಟಿ ಮೊತ್ತದ ನೆರವನ್ನು ಪಡೆದು 3 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ನೂತನ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ.
ಪ್ರಸ್ತುತ ಶಾಲೆಯಲ್ಲಿ ವಿಶಾಲವಾದ ಬೋಧನಾ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 500 ಆಸನವುಳ್ಳ ಆಡಿಟೋರಿಯಂ, ಬಾಲಕ/ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳಿವೆ. 60 ಸಿ.ಸಿ.ಕ್ಯಾಮೆರಾಗಳನ್ನು ದಾನಿಗಳೊಬ್ಬರು ಅಳವಡಿಸಿಕೊಟ್ಟಿದ್ದಾರೆ. ಪ್ರಸ್ತುತ ಸರ್ಕಾರಿ, ಅತಿಥಿ ಹಾಗೂ ಹೊರಸಂಪನ್ಮೂಲದ ಮೂಲಕ 13 ಶಿಕ್ಷಕರಿದ್ದಾರೆ. ಶಾಲೆಗೆ 265 ವಿದ್ಯಾರ್ಥಿಗಳು ದಾಖಲಾಗಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಮಾಹೆ ವಿದ್ಯಾರ್ಥಿಗಳು-ಪೋಷಕರು-ಶಿಕ್ಷಕರ ಸಭೆಯನ್ನು ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ನಡೆಸಿ ಪ್ರತಿ ವಿದ್ಯಾರ್ಥಿಯ ಪ್ರಗತಿ ಪರಿಶೀಲಿಸಲಾಗುತ್ತಿದೆ.

ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಸಂವಹನ ನಡೆಸುವ ಕೌಶಲ ಹೊಂದಿದ್ದಾರೆ. ಇದರಿಂದಾಗಿ ಖಾಸಗಿ ಕಾನ್ವೆಂಟ್‌ಗಳಿಂದ ಮಕ್ಕಳನ್ನು ಬಿಡಿಸಿ ಈ ಸರ್ಕಾರಿ ಶಾಲೆಗೆ ಸ್ಥಳೀಯರು ಸೇರಿಸುತ್ತಿದ್ದಾರೆ. ಇದರಿಂದಾಗಿ ಪ್ರತಿ ಪೋಷಕರಿಗೆ ವಾರ್ಷಿಕವಾಗಿ ಕನಿಷ್ಠ ಒಂದುವರೆ ಲಕ್ಷ ಉಳಿತಾಯವಾಗುತ್ತಿದೆ.
ಒಟ್ಟಾರೆ, ಗುಣಮಟ್ಟದ ಶಿಕ್ಷಣ, ಅತ್ಯಾಕರ್ಷಕ ಕಟ್ಟಡದಲ್ಲಿ ಮೂಲಭೂತ ಸೌಕರ್ಯ, ಬಸ್‌ಸೌಕರ್ಯ, ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ, ಟ್ರಸ್ಟ್‌ನ ಸಮಗ್ರ ಮೇಲ್ವಿಚಾರಣೆಯಿಂದ ಸಮುದಾಯದವರ ಭಾಗವಹಿಸುವಿಕೆಯಿಂದ ಮುಚ್ಚುವ ಹಂತದಲ್ಲಿದ್ದ ಕುಗ್ರಾಮದ ಶಾಲೆಯು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿ, ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ.
Village school success story: Hangaravalli Government Higher Primary School selected for national level in Delhi








