ಶಿವಮೊಗ್ಗ: ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವಿಕೆ ಅತ್ಯಾಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಬಳಸುವ ಮೂಲಕ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹಿಂದೂಸ್ತಾನಿ ಸಂಗೀತ ಕಲಾವಿದೆ ವಿದುಷಿ ವಸುಧಾ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಚರಕ ಮಹಿಳಾ ವಿವಿದೋದ್ಧೇಶ ಸಹಕಾರ ಸಂಘದ ವತಿಯಿಂದ ಬ್ರಾಸಂನಲ್ಲಿ ಆಯೋಜಿಸಿದ್ದ ಮೂರು ದಿನಗಳ ನೈಸರ್ಗಿಕ ಕೈಮಗ್ಗ ಮತ್ತು ಕೈಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒತ್ತಡದ ಜೀವನದ ನಡುವೆ ಪ್ರಕೃತಿಯನ್ನು ಪ್ರೀತಿಸುವ ಮತ್ತು ಅದರೊಂದಿಗೆ ಬದುಕುವ ಮನೋಭಾವ ಬೆಳೆಸಿಕೊಳ್ಳುವುದು ಬಹುಮುಖ್ಯ ಎಂದ ಶರ್ಮ, ರಂಗಕರ್ಮಿ ಪ್ರಸನ್ನ ಅವರು ಸ್ಥಾಪಿಸಿದ ಚರಕ ಸಂಸ್ಥೆ ನೂರಾರು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಕಲ್ಪಿಸಿದೆ. ಚರಕ ಉತ್ಪನ್ನಗಳು ಇಡೀ ದೇಶದಲ್ಲೇ ತನ್ನದೇ ಆದ ವಿಶಿಷ್ಟ ಗುರುತು ಮೂಡಿಸಿದ್ದು, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚರಕ ಉತ್ಪನ್ನಗಳಿಗೆ ದೊರೆತ ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ನಿಗಮದ ‘ಅತ್ಯುತ್ತಮ ರಾಷ್ಟ್ರೀಯ ಬ್ರಾಂಡ್ ನಿರ್ಮಾಣ ಪ್ರಶಸ್ತಿ’ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ನಡೆಯಲಿರುವ ಚರಕ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಗ್ರಾಮೀಣ ಕರಕುಶಲ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕರಿಸಬೇಕು ಎಂದು ಮಹಾಲಕ್ಷಿ ಮತ್ತು ಚರಕ ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದರು.
ಈ ಸಂದರ್ಭದಲ್ಲಿ ಚರಕ ಸಂಸ್ಥೆಯ ಎನ್.ರಮೇಶ್, ನಾಗರತ್ನ, ಪೀಟರ್, ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು. ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಇಂದಿನ ‘ಸಿದ್ದರಾಮಯ್ಯ ಬಜೆಟ್’ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?: ಇಲ್ಲಿದೆ ಸಂಪೂರ್ಣ ಮಾಹಿತಿ








