ಕೆಎನ್‌ಎನ್‌ಸಿನಿಮಾಡೆಸ್ಕ್: ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಶೀರ್ಷಿಕೆಯಲ್ಲಿಯೇ ಟೀನೇಜ್ ಸ್ಟೋರಿಯ ಕಂಪು ಹೊಂದಿರುವ ಈ ಸಿನಿಮಾ ಈಗಾಗಲೇ ನಾನಾ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿತ್ತು.
ಆ ಕಾರಣದಿಂದಲೇ ಎಲ್ಲರೂ ಟ್ರೈಲರ್ ನತ್ತ ದೃಷ್ಟಿ ನೆಟ್ಟಿದ್ದರು. ಇದೀಗ ಚಿತ್ರತಂಡ ಯುವ ಆವೇಗದಿಂದ ತೊನೆದಾಡುತ್ತಿರುವಂತೆ ಭಾಸವಾಗುವ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಅದರೊಳಗೆ ಹದಿಹರೆಯದ ಮನಸುಗಳ ನಾನಾ ಮಗ್ಗುಲುಗಳು ಹರೆಯದ ತೊರೆಯೊಂದಿಗೆ ದುಮ್ಮಿಕ್ಕಿ ಹರಿದಿವೆ. ಈ ಟ್ರೈಲರ್ ಅನ್ನು ಸೈಡ್ ಎ ಅಂತ ಹೆಸರಿಸಲಾಗಿದೆ. ಇದನ್ನು ನೋಡುತ್ತಲೇ ಒಟ್ಟಾರೆ ಸಿನಿಮಾದಲ್ಲೇನೋ ಇದೆಯೆಂಬ ಗಟ್ಟಿಯಾದ ಭರವಸೆ ತಂತಾನೇ ಮೂಡಿಕೊಳ್ಳುತ್ತೆ. ಸೈಡ್ ಬಿ ಟ್ರೈಲರ್ ಗಾಗಿ ಕಾತರವೂ ಮೂಡಿಕೊಳ್ಳುತ್ತೆ. ಅಷ್ಟರಮಟ್ಟಿಗೆ ಈ ಟ್ರೈಲರ್ ಪರಿಣಾಮಕಾರಿಯಾಗಿ ಮೂಡಿ ಬಂದಿದೆ!
`ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೈಟಲ್ಲೇ ಹೇಳುವಂತೆ ಯೂತ್ಸ್ ಸಬ್ಜೆಕ್ಟ್ ಸಿನಿಮಾ. ಕಾಲೇಜ್ ಹುಡುಗ, ಹುಡುಗಿಯರ, ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಹಾಗಂತ ಇದು ಮಾಮೂಲಿಯಾಗೂ ಇದು ಸಿದ್ಧಸೂತ್ರದ ಚೌಕಟ್ಟಿಗೊಳಪಟ್ಟಿಲ್ಲ ಅನ್ನೋದು ಟ್ರೇಲರ್ ಎಳೆಯಲ್ಲಿ ಸ್ಪಷ್ಟವಾಗುತ್ತದೆ. ಹೊಡೆದಾಟ, ಬಡಿದಾಟ, ರ್ಯಾಗಿಂಗ್, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಸೇರಿದಂತೆ ಇಲ್ಲಿ ಎಲ್ಲವೂ ಇದೆ. ಅದರ ಜೊತೆ ಜೊತೆಗೇ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಗಮನ ಸೆಳೆಯುವಂತಿದೆ. ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಕಥೆಯ ಸೂಚನೆಯಿದೆ. ಹಿಡಿತ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಇದೆ. ಪ್ರಸ್ತುತ ಕಾಲದ ಟೀನೇಜ್ ಹುಡುಗರ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಟ್ರೇಲರ್.
ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಡಿಫರೆಂಟಾಗಿ ಕಾಣಿಸಲಿದ್ದಾರೆಂಬ ನಿಖರ ಮಾಹಿತಿಯನ್ನು ನಿರ್ದೇಶಕ ಅರುಣ್ ಅಮುಕ್ತ ನೀಡುತ್ತಾ ಬಂದಿದ್ದಾರೆ. ಅವರ ಪಾತ್ರವನ್ನು ಅಷ್ಟೇ ಗೌಪ್ಯವಾಗಿ ಕಾಪಾಡಿಕೊಂಡು ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ ಚಿತ್ರತಂಡ. ಒಟ್ಟಾರೆಯಾಗಿ ಟ್ರೈಲರ್ ನೋಡಿದರೆ ನಿರ್ದೇಶಕರು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅರುಣ್ ಅಮುಕ್ತ ಅತ್ಯಂತ ಆಸ್ಥೆಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆಂಬುದಕ್ಕೂ ಕೂಡಾ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ. ಕಾಲೇಜು ಕೇಂದ್ರಿತ ಕಥೆ ಅಂದಾಕ್ಷಣ ಒಂದು ಕಲ್ಪನೆ ಮೊಳೆತುಕೊಳ್ಳುತ್ತದೆ. ಅದನ್ನು ಮೀರಿದ ಆತ್ಮದೊಂದಿಗೆ ಅರುಣ್ ಅಮುಕ್ತ ಈ ಸಿನಿಮಾವನ್ನು ದೃಷ್ಯೀಕರಿಸಿರುವ ಲಕ್ಷಣಗಳಿವೆ. ಈವರೆಗೂ ಹಂತ ಹಂತವಾಗಿ ಕಾಯ್ದುಕೊಂಡಿದ್ದ ಕುತೂಹಲವನ್ನು ಈ ಸೈಡ್ ಎ ಟ್ರೈಲರ್ ಸಾರ್ಥಕಗೊಳಿಸಿದೆ.
ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.